
ಉಳ್ಳಾಲ: ಪ್ರತಿಭೆ ಇದ್ದವರೆಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಅವಕಾಶ ಇದ್ದು ಪ್ರಯತ್ನಿಸಿದರೆ ಸುಲಭವಾಗಿ ಕೆಲಸ ಪಡೆಯಲು ಸಾಧ್ಯ. ಆದರೆ
ಸಮುದಾಯದ ಯುವಕರು ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದರೂ ಸರ್ಕಾರಿ ಕೆಲಸ ಪಡೆಯುವಲ್ಲಿ, ಸರ್ಕಾರಿ ಕೆಲಸ ಮಾಡಿಸುವಲ್ಲಿ ತೀರಾ ಹಿಂದುಳಿದ ಕಾರಣ ಖಾಸಗಿ ಕಂಪನಿ ಅಥವಾ ವಿದೇಶದಲ್ಲಿ ಕೆಲಸ ಅವಲಂಭಿಸುವಂತಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ
ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಅಭಿಪ್ರಾಯಪಟ್ಟರು
ಪಾನೀರ್ ಮೆರ್ಸಿಯಮ್ಮ ಇಗರ್ಜಿ ವತಿಯಿಂದ ಕಥೊಲಿಕ್ ಸಭಾ ಪಾನೀರ್ ಘಟಕದ ಆಶ್ರಯದಲ್ಲಿ ಭಾನುವಾರ ಚರ್ಚ್ ಸಭಾಂಗಣದಲ್ಲಿ ನಡೆದ ‘ಪ್ರತಿಭಾ ಪುರಸ್ಕಾರ-2025’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಎಸ್ಸೆಸ್ಸೆಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉನ್ನತ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪಾನೀರ್ ಮೆರ್ಸಿಯಮ್ಮ ಇಗರ್ಜಿಯ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೋ ಮಾತನಾಡಿ, ಸಮುದಾಯದ ಯುವಕರು ಸೇವೆಯಲ್ಲಿ ಮುಂದಿದ್ದರೂ ನಮ್ಮ ಹಕ್ಕು ಪಡೆಯುವಲ್ಲಿ ಹಿಂದಿದ್ದೇವೆ, ಸರ್ಕಾರಿ ಕೆಲಸ ಪಡೆಯಲು ಕಷ್ಟಪಡಬೇಕು. ಆದರೆ ಒಂದು ಬಾರಿ ಪಡೆದರೆ ನಿವೃತ್ತಿ ಬಳಿಕವೂ ಪ್ರಯೋಜನ ಸಿಗುತ್ತದೆ ಎಂದರು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಸರಿಟಾ ಡಿಸೋಜ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ಹಾ, ದಯಾಮಾತೆ ಚರ್ಚ್ ಮಾಜಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಕಾರ್ಯಕ್ರಮ ಸಂಯೋಜಕ ಇಯಾನ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.
ಐವನ್ ಮೊಂತೆರೋ ಸ್ವಾಗತಿಸಿದರು. ರುವಿತಾ ಮೆನೇಜಸ್ ವಿದ್ಯಾರ್ಥಿಗಳ ಹೆಸರು ವಾಚಿಸಿದರು.
ವೈಲೆಟ್ ಡಿಸೋಜ ವಂದಿಸಿದರು. ಅಶ್ವಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.