ಪೋರ್ಚುಗಲ್, ನ.11: ನಾನು ಕ್ರೀಡಾ ಬದುಕಿನ ಕೊನೆಯನ್ನು ತಲುಪಿದ್ದು, 2026ರ ಫಿಫಾ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್ ಆಗಲಿದೆ ಎಂದು ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮಂಗಳವಾರ ಘೋಷಿಸಿದ್ದಾರೆ.

ನೀವು ವಿಶ್ವಕಪ್ಗೆ ಯಾವಾಗ ವಿದಾಯ ಹೇಳುವಿರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ, ‘‘ಶೀಘ್ರವೇ’’ ಎಂದರು. ‘‘ನನಗೆ ‘ಶೀಘ್ರ’ ಎಂದರೆ 10 ವರ್ಷಗಳು’’ ಎಂದು ಅವರು ಮತ್ತೆ ಹೇಳಿದರಾದರೂ, ‘‘ಇಲ್ಲ, ನಾನು ಹಾಸ್ಯ ಮಾಡುತ್ತಿದ್ದೇನೆ’’ ಎಂದರು. ‘‘ನನಗೆ 41 ವರ್ಷ ಆಗುತ್ತಿದೆ. ಇದು ಸರಿಯಾದ ಸಮಯ ಎಂದು ನನಗನಿಸುತ್ತದೆ’’ ಎಂದರು.
ಫುಟ್ಬಾಲ್ ದಿಗ್ಗಜ ರೊನಾಲ್ಡೊ ಕ್ಲಬ್ ಗಳು ಮತ್ತು ದೇಶಕ್ಕಾಗಿ 950ಕ್ಕೂ ಅಧಿಕ ಗೋಲುಗಳನ್ನು ಬಾರಿಸಿದ್ದಾರೆ. ಅವರು 2002ರಲ್ಲಿ ಸ್ಪೋರ್ಟಿಂಗ್ ಸಿಪಿ ಕ್ಲಬ್ ಮೂಲಕ ತನ್ನ ಕ್ರೀಡಾ ಜೀವನ ಆರಂಭಿಸಿದರು. ಅವರು ಈಗ ಸೌದಿ ಅರೇಬಿಯದ ಅಲ್-ನಸ್ರ್ ಕ್ಲಬ್ ಪರವಾಗಿ ಆಡುತ್ತಿದ್ದಾರೆ.
ಈ ಕ್ಷಣದಲ್ಲಿ ನಾನು ಅತ್ಯುತ್ತಮವಾಗಿದ್ದೇನೆ ಎಂದು ನನಗನಿಸುತ್ತಿದೆ. ಈಗಲೂ ನಾನು ವೇಗ ಮತ್ತು ತೀಕ್ಷ್ಣತೆ ಹೊಂದಿದ್ದೇನೆ. ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ಆನಂದಿಸುತ್ತಿದ್ದೇನೆ. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ‘ಶೀಘ್ರವೇ’ ಎಂದರೆ ಇನ್ನು ಒಂದು ಅಥವಾ ಎರಡು ವರ್ಷಗಳು’’ ಎಂದರು.
ರೊನಾಲ್ಡೊ ಅವರೀಗ 2026ರ ವಿಶ್ವಕಪ್ ಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.


