
ಮಂಗಳೂರು ವಿವಿಯಲ್ಲಿ ‘ಗಿಳಿವಿಂಡು’ ಕಾರ್ಯಕ್ರಮ
ಕನ್ನಡಪರ ಮನಸ್ಸುಗಳು ಒಟ್ಟುಗೂಡಬೇಕು: ಪ್ರೊ.ಶಂಕರ್ ಶೆಟ್ಟಿ
ಕೊಣಾಜೆ:: ಸಮಾಜಕ್ಕೆ ಕನ್ನಡದ ಕೊಡುಗೆ ಅಪಾರ. ಕನ್ನಡಕ್ಕೆ ವಿಶೇಷ ಶಕ್ತಿ ಇದೆ. ಕನ್ನಡವನ್ನು ಎಂದಿಗೂ ಹೀನವಾಗಿ ನೋಡದೆ ಕನ್ನಡಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ. ಮಂಗಳೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯು ಗಿಳಿವಿಂಡುವಿನ ಮೂಲಕ ಕನ್ನಡಪರ ಮನಸ್ಸುಗಳನ್ನು ಒಟ್ಟುಗೂಡಿಸಿರುವುದು ಶ್ಲಾಘನೀಯವಾಗಿದೆ ಮಂಗಳೂರು ವಿವಿ ಕನ್ನಡ ವಿಭಾಗದ ಪ್ರಥಮ ತಂಡದ ವಿದ್ಯಾರ್ಥಿ ಹಾಗೂ ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಶಂಕರ್ ಶೆಟ್ಟಿ ಅವರು ಹೇಳಿದರು.
ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಗಿಳಿವಿಂಡು(ರಿ), ಹಿರಿಯ ವಿದ್ಯಾರ್ಥಿ,ಅದ್ಯಾಪಕ ಹಾಗೂ ಸಿಬ್ಬಂದಿಗಳ ಒಕ್ಕೂಟ, ಮಂಗಳಗಂಗೋತ್ರಿ ಇದರ ಆಶ್ರಯದಲ್ಲಿ ‘ಬಾರಿಸು ಕನ್ನಡ ಡಿಂಡಿಮವ, ಗಿಳಿವಿಂಡು ಯಾನ- ಮರಳಿ ಮನೆಗೆ’ ಎಂಬ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕನ್ನಡದ ಪ್ರಥಮ ಬ್ಯಾಚ್ ನಲ್ಲಿ 1968 ರಲ್ಲಿ 17 ಮಂದಿ ಒಡನಾಡಿಗಳಾಗಿದ್ದೆವು. ಎಲ್ಲರೂ ಕನ್ನಡ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಿ ಗುರುಗಳಾದ ಎಸ್ ವಿಪಿ ಪರಮೇಶ್ಬರ ಭಟ್ಟರಿಗೆ ಗೌರವ ತಂದುಕೊಟ್ಟಿದ್ದೇವೆ. ಪರಮೇಶ್ವರ ಭಟ್ಟರ ಪಾಠದ ವೈಖರಿ ಅಪೂರ್ವವಾದುದು. ಅಂತಹ ಗುರುಗಳ ಅಡಿಯಲ್ಲಿ ಕಲಿತ ನಾವೆಲ್ಲರೂ ಧನ್ಯರು ಎಂದರು.
ವಿವಿ ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರೊ.ಚಂದ್ರಕಲಾ ನಂದಾವರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಓದುವ ಆಸಕ್ತಿಯನ್ನು ಮೀರಿದ್ದು ಯಾವುದೇ ಇಲ್ಲ. ಆದ್ದರಿಂದ ಎಲ್ಲರೂ ಓದಿನ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಿದೆ. ಸಾಹಿತ್ಯ ಹಾಗೂ ಸಾಹಿತ್ಯದ ಓದಿನಲ್ಲಿ ಒಂದು ಜೀವಾನುಭವ ಇರುತ್ತದೆ. ಬದುಕಿನ ಶಕ್ತಿಯನ್ನು ಅದು ಕಟ್ಟಿಕೊಡುತ್ತದೆ. ಗಿಳಿವಿಂಡುವಿನ ಮೂಲಕ ಕನ್ನಡದ ಕೆಲಸಗಳು ಮುಂದುವರಿಯಲಿ ಎಂದರು.
ಸಮಾರಂಭದಲ್ಲಿ ಗಿಳಿವಿಂಡುವಿನ ಸಹಕಾರ್ಯದರ್ಶಿ ಡಾ. ನರಸಿಂಹ ಮೂರ್ತಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಿಳಿವಿಂಡುವಿನ ಅಧ್ಯಕ್ಷರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಬಿ.ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗಪ್ಪ ಗೌಡ ಅವರು ಸ್ವಾಗತಿಸಿದರು. ಅಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ವಂದಿಸಿದರು. ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.
‘ಆಧುನಿಕ ತಂತ್ರಜ್ಞಾನ, ವಿಜ್ಞಾನದ ಭರಾಟೆಯಲ್ಲಿ ಸಮಾಜದಲ್ಲಿ ಹಲವಾರು ಬದಲಾವಣೆಗಳಾಗಿವೆ. ಸಮಾಜದ ಸ್ವಾಸ್ಥ್ಯ ಆರೋಗ್ಯ ಕಾಪಾಡಲು ಮಾನವಿಕ ವಿಭಾಗಗಳು ,ಭಾಷಾ ವಿಭಾಗಗಳು ಜೀವಂತವಿರಬೇಕಿದೆ. ಒಂದು ವೇಳೆ ಮುಚ್ಷಿದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಗಂಡಾಂತರ ಕಾದಿದೆ”
ಪ್ರೊ.ವೈ .ಸಂಗಪ್ಪ
ಹಣಕಾಸು ಅಧಿಕಾರಿ,ಮಂಗಳೂರು ವಿವಿ