ಕಾಪು: ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಜೊತೆ ನಮ್ಮ ಇಂಡಿಯಾ 5 ಟಿ20 ಪಂದ್ಯಗಳ ಸರಣಿ ಆಡುತ್ತಿದೆ. ಈ ನಡುವೆ ಕಾಪು ಶ್ರೀ ಹೊಸ ಮಾರಿಗುಡಿಗೆ ಕ್ಯಾಪ್ಟನ್ SKY ಪತ್ನಿ ದೇವಿಶಾ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ದೇವಸ್ಥಾನದ ಪ್ರಾಂಗಣದ ಮುಂದಿರುವ ಬೃಹತ್ ಕಲ್ಲಿನ ಕಂಬವನ್ನು ಸೇವೆ ರೂಪದಲ್ಲಿ ಸೂರ್ಯಕುಮಾರ್ ದಂಪತಿ ಕೊಟ್ಟಿದ್ದರು. ಆ ಕಂಬದ ಮುಂದೆ ದೇವಿಶಾ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾದವ ಆರ್. ಪಾಲನ್ ಹಾಗೂ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಉಪಸ್ಥಿತರಿದ್ದರು.






