ಉಳ್ಳಾಲ: ಶಾಲೆಗಳಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳೂ ಅಮೂಲ್ಯ. ಇತರ ಶಿಕ್ಷಣ ಸಂಸ್ಥೆಗಳಲ್ಲಿರುವ ವ್ಯವಸ್ಥೆಗಿಂತಲೂ ಹೆಚ್ಚಿನ ವ್ಯವಸ್ಥೆ ನಮ್ಮ ಸಂಸ್ಥೆಗಳಲ್ಲೂ ಇರಬೇಕೆನ್ನುವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಡಿ.25ರಂದು ಕ್ರೀಡಾಂಗಣದ ಉದ್ಘಾಟನೆ ನಡೆಯಲಿದೆ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಸಯ್ಯದ್ ಮದನಿ ಜಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ ಹನೀಫ್ ಅಭಿಪ್ರಾಯಪಟ್ಟರು.

ಉಳ್ಳಾಲದ ಮಾಸ್ತಿಕಟ್ಟೆ ಹಝ್ರತ್ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಸಯ್ಯದ್ ಮದನಿ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರೀಡೆ ಬದುಕಿನುದ್ದಕ್ಕೂ ಆರೋಗ್ಯ ಮತ್ತು ಮನಸ್ಸಿಗೆ ಸಂತೋಷ ನೀಡುತ್ತದೆ. ಹಝ್ರತ್ ಶಾಲೆಯಲ್ಲಿ ವಿಶಾಲ ಕ್ರೀಡಾಂಗಣ ನಿರ್ಮಿಸುವ ಮೂಲಕ ಟ್ರಸ್ಟ್ ಅಧೀನದ ಶಿಕ್ಷಣ ಸಂಸ್ಥೆಗಳಿಗೆ ಕ್ರೀಡಾಂಗಣ ಕೊರತೆ ನಿವಾರಿಸಲಾಗಿದೆ ಎಂದು ತಿಳಿಸಿದರು. ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್ ಕ್ರೀಡಾಕೂಟ ಉದ್ಘಾಟಿಸಿದರು.
ಈ ಸಂದರ್ಭ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹುಸೈನ್, ದರ್ಗಾ ಕೋಶಾಧಿಕಾರಿ ನಾಝಿಂ, ಉಳ್ಳಾಲ ಗುಚ್ಚ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಹಳೆಕೋಟೆ ಶಾಲಾಭಿವೃದ್ಧಿ ಸದಸ್ಯರಾದ ಅಲ್ತಾಫ್ ಯು.ಎಚ್., ಕರೀಂ ಯು.ಎಚ್., ಕ್ರೀಡಾ ಸಂಘಟಕ ಸಾಜಿದ್ ಉಳ್ಳಾಲ್, ಅಧೀನ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಸಪ್ನಾ ವಂದಿಸಿದರು. ಶಿಕ್ಷಕಿ ಶಕೀಲಾ ಕಾರ್ಯಕ್ರಮ ನಿರೂಪಿಸಿದರು.


