ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಹಾಗೂ ಸೇವಾ ಸಂಸ್ಥೆಯ ರಜತ ಮಹೋತ್ಸವ ಕಾಯ೯ಕ್ರಮವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.

ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀವ೯ಚನ ನೀಡಿ ದೀನ ದಲಿತರ ಸೇವೆ ಸಹಕಾರಿ ವ್ಯವಸ್ಥೆಯಿಂದ ಸಾಧ್ಯ. ಅಶಕ್ತರಿಗೆ ಶಕ್ತಿ ತುಂಬುವುದೇ ಸಹಕಾರದ ಧೋರಣೆ. ಸ್ವಸ್ವಹಾಯ ಸಂಘಟನೆಗಳಿಂದ ಸಾಲ ಪಡೆದು, ಅದನ್ನು ನಿಗಧಿತ ಸಮಯದಲ್ಲಿ ಮರುಪಾವತಿಸುವುದು ಸದಸ್ಯರ ಕರ್ತವ್ಯ. ಈ ಮೂಲಕ ಇತರರ ಆರ್ಥಿಕ ಸಬಲೀಕರಣಕ್ಕೂ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರಿ ತತ್ವದಿಂದಾಗಿ ದೇಶ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ. ಮಹಿಳಾ ಸಬಲೀಕರಣವಾದರೆ ದೇಶ ಪ್ರಗತಿ ಸಾಧಿಸುತ್ತದೆ ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ವಸಹಾಯ ಸಂಘಗಳು ಸಾಮಾನ್ಯರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಸಹಕಾರಿ ಕ್ಷೇತ್ರದ ಮುಖೇನ ಕಳೆದ 25 ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಅವರಿಗೆ ಮುಂದೆ ರಾಜ್ಯ ಸಹಕಾರಿ ರತ್ನ ಪ್ರಶಸ್ತಿಗೆ ಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಹಿರಿಯ ಕಾರ್ಯಕರ್ತೆಯರಾದ ದರ್ಶಿನಿ ಹಾಗೂ ಜಯಂತಿ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಮುಡಾರು ವಲಯ (ಪ್ರಥಮ) ಬೆಳುವಾಯಿ ವಲಯ (ದ್ವೀತಿಯ) ಬಹುಮಾನ ವಿತರಿಸಲಾಯಿತು.
ಸಂತೋಷ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಪ್ರಾಸ್ತಾವನೆಗೈದರು. ನಿರ್ದೇಶಕರಾದ ಹಸ್ದುಲ್ಲಾ ಇಸ್ಮಾಯಿಲ್, ಶೆರ್ಲಿ ಟಿ.ಬಾಬು ಉಪಸ್ಥಿತರಿದ್ದರು. ನಿರ್ದೇಶಕ ಇಮ್ಯೂನುವೆಲ್ ಮೊನೀಸ್ ಮತ್ತು ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಂಯೋಜಕ ಗಣೇಶ್ ಬಾರ್ದಿಲ ವಂದಿಸಿದರು.
ನಂತರ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆದವು. ರಜತಮಹೋತ್ಸವದ ಅಂಗವಾಗಿ ಮೂಡುಬಿದಿರೆ ಜ್ಯೋತಿನಗರದಿಂದ ಪ್ರಾರಂಭಗೊಂಡು, ಪ್ರೇಟೆಯ ಮುಖ್ಯ ರಸ್ತೆಯಲ್ಲಿ ಸಾಗಿ ಸಮಾಜಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು.


