ಪಾಸ್‌ಪೋರ್ಟ್ ವೆರಿಫಿಕೇಶನ್ ವೇಳೆ ಸುಳ್ಳು ದಾಖಲೆ ಸೃಷ್ಟಿಸಿದ ಪೊಲೀಸ್ ಸಿಬ್ಬಂದಿಯನ್ನೇ ಬಂಧಿಸಿದ ಪೊಲೀಸರು!
ಮಂಗಳೂರು: ಪಾಸ್‌ಪೋರ್ಟ್ ವೆರಿಫಿಕೇಶನ್ ವೇಳೆ ಸುಳ್ಳು ದಾಖಲೆಗಳನ್ನು ನೀಡಿ ಫೋರ್ಜರಿ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಪೊಲೀಸರೇ ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಫೋರ್ಜರಿ ಮಾಡಿದ ಆರೋಪದಡಿ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಶಕ್ತಿ ದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಕೆಲಸ ಮಾಡುತ್ತಿದ್ದ ವಿಟ್ಲ ಪೊಲೀಸ್ ಠಾಣೆಯಲ್ಲೇ ಎಫ್‌ಐಆರ್ ದಾಖಲಾಗಿದೆ.
ಶಕ್ತಿ ದಾಸ್ ಎಂಬಾತ 2025ರ ಫೆಬ್ರವರಿ ತಿಂಗಳಿನಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದನು. ಆದರೆ ಪೊಲೀಸ್ ವೆರಿಫಿಕೇಶನ್ ವೇಳೆ ಆತ ನೀಡಿದ್ದ ವಿಳಾಸವು ದಾಖಲಾತಿಗಳಿಗೆ ತಾಳೆಯಾಗದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ತದನಂತರ ಜೂನ್‌ನಲ್ಲಿ ಆತ ಮತ್ತೆ ಮರು ಅರ್ಜಿ ಸಲ್ಲಿಸಿದ್ದನು.
ಈ ಮರು ಅರ್ಜಿಯ ಪರಿಶೀಲನೆಯ ಹೊಣೆ ಹೊತ್ತಿದ್ದ ಠಾಣಾ ಸಿಬ್ಬಂದಿ ಪ್ರದೀಪ್, ಸಂಬಂಧಪಟ್ಟ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಗಮನಕ್ಕೆ ಬಾರದಂತೆ ಅವರ ಹೆಸರಿನಲ್ಲೇ ನಕಲಿ ವರದಿ ಸಿದ್ಧಪಡಿಸಿದ್ದರು. ಅಷ್ಟೇ ಅಲ್ಲದೆ, ಸಾಬು ಮಿರ್ಜಿ ಅವರ ಸಹಿಯನ್ನು ಫೋರ್ಜರಿ ಮಾಡಿ ಮೇಲಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಮಾಡಿದ್ದರು. ಬಳಿಕ ಈ ಅಕ್ರಮ ಯಾರಿಗೂ ತಿಳಿಯಬಾರದೆಂದು ಸಂಬಂಧಪಟ್ಟ ಕಡತಗಳನ್ನು ನಾಶಪಡಿಸಿದ್ದರು ಎನ್ನಲಾಗಿದೆ.
ಡಿಸೆಂಬರ್ 19ರಂದು ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ ಈ ಗಂಭೀರ ಲೋಪ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಪ್ರಮುಖ ಗುರುತಿನ ಚೀಟಿಯಾದ ಪಾಸ್‌ಪೋರ್ಟ್ ಪಡೆಯಲು ಅಪರಾಧಿಕ ನಂಬಿಕೆ ದ್ರೋಹ ಎಸಗಿದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರ ಸೂಚನೆಯ ಮೇರೆಗೆ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ, ಪೊಲೀಸ್ ಸಿಬ್ಬಂದಿ ಪ್ರದೀಪ್‌ನನ್ನು ವಶಕ್ಕೆ ಪಡೆದು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


