ಮಂಗಳೂರು: ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ(ಬಿಸಿಸಿಐ) ವತಿಯಿಂದ ವ್ಯಾಪಾರಿಗಳು ಹಾಗೂ ಉದ್ಯಮಿ ಗಳಿಗಾಗಿ ಸೈಬರ್ ಸೆಕ್ಯೂರಿಟಿ ಮತ್ತು ಜಾಗತಿಕ ಉದ್ಯಮ ಅವಕಾಶಗಳ ಕುರಿತು ವಿಶೇಷ ಸಂವಾದ ಕಾರ್ಯಕ್ರಮ ಮಂಗಳವಾರ ನಗರದ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆಯಿತು.

ದೈನಂದಿನ ಬದುಕಿನಲ್ಲಿ ಸೈಬರ್ ಸೆಕ್ಯುರಿಟಿಯ ಮಹತ್ವದ ಕುರಿತು ಮಾಹಿತಿ ನೀಡಿದ ಅಡ್ವಾನ್ಸ್ಡ್
ಸೈಬರ್ ಸೆಕ್ಯೂರಿಟಿ ತಜ್ಞ ಸೌಮಿತ್ರ ಸೇನ್, ಮುಂದಿನ 15 ವರ್ಷಗಳಲ್ಲಿ ಭಾರತವು ಡಿಜಿಟಲ್ ಯುಗದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಲಿದೆ ಹಾಗೂ ಇನ್ನು ಕೇವಲ ಮೂರು ದಶಕಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆದು ನಿಲ್ಲ ಲಿದೆ ಎಂದು ಭವಿಷ್ಯ ನುಡಿದರು.

ಗುರುತು ಕಳವು (identity theft) ಹಾಗೂ ಡೀಪ್ ಫೇಕ್ ದುರುಪಯೋಗವನ್ನು ಎತ್ತಿ ತೋರಿಸಿದ ಅವರು, ಕೃತಕ ಬುದ್ಧಿಮತ್ತೆಯ (AI) ಯುಗದಲ್ಲಿ ಇವು ಪ್ರಮುಖ ಬೆದರಿಕೆಗಳಾಗಿವೆ ಎಂದು ಹೇಳಿದರು.

ವಿವಿಧ ಬಗೆಯ ಸೈಬರ್ ದಾಳಿಯ ಕುರಿತು ವಿವರಿಸಿದ ಸೌಮಿತ್ರ ಸೇನ್, ಸುರಕ್ಷಿತವಾರಲು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.
‘ಝೀರೋ ಟ್ರಸ್ಟ್ ಸೆಕ್ಯೂರಿಟಿ’ಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಜಾಗತಿಕ ಭೌಗೋಳಿಕ ರಾಜಕಾರಣದಲ್ಲಿ ಸೈಬರ್ ಯುದ್ಧ ಮಹತ್ವದ ಸಾಧನವಾಗಿ ಬದಲಾಗಿದೆ ಎಂಬುದರತ್ತ ಬೊಟ್ಟು ಮಾಡಿದರು.

‘ಜಾಗತಿಕ ವ್ಯಾಪಾರ ಅವಕಾಶಗಳ’ ಕುರಿತು ಉಪನ್ಯಾಸ ನೀಡಿದ ಚೀನಾದ ಕಾಮಚಿ ಗ್ರೂಪ್‌ನ
ನಿರ್ದೇಶಕ ಮುಹಮ್ಮದ್ ರಬೀ ರುಕ್ನುದ್ದೀನ್, ಭಾರತ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ
ಯಾಗಿದ್ದರೂ, ಅಂತರ್‌ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಇನ್ನಷ್ಟು ಶಕ್ತಿಯುತ ಅರ್ಪಣಾ ಮನೋಭಾವ ಮತ್ತು ಬ್ರಾಂಡಿಂಗ್ ಕಾರ್ಯತಂತ್ರಗಳ ಅಗತ್ಯತೆ ಇದೆ ಎಂದು ಹೇಳಿದರು.

ಉತ್ಪನ್ನಗಳನ್ನು ಮಾರುಕಟ್ಟೆಯ ಮೌಲ್ಯದೊಂದಿಗೆ ಗುರುತಿಸುವಂತೆ ಉದ್ಯಮಿಗಳಿಗೆ ಸಲಹೆ ನೀಡಿದ ಅವರು, ಬ್ರಾಂಡ್ ಒಂದನ್ನು ನಿರ್ಮಿಸಿ, ಅದನ್ನು ಜಾಗತಿಕ ಖರೀದಿದಾರರ ಬಳಿಗೆ ತೆಗೆದುಕೊಂಡು ಹೋಗಿ ಎಂದು ಕಿವಿಮಾತು ಹೇಳಿದರು.
ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಿಸಿಸಿಐ ಕಾರ್ಯಕಾರಿಣಿ ಸಮಿತಿಯ ಸದಸ್ಯ ರಾದ ಅಬ್ದುಲ್ಲಾ ಮೋನು ಮೊಯ್ದಿನ್ ಹಾಗೂ ಅಬ್ದುಲ್ ರವೂಫ್ ಸುಲ್ತಾನ್ ಮತ್ತಿತರರು ಉಪಸ್ಥಿತರಿದ್ದರು.
ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಸ್ವಾಗತಿಸಿದರು. ಖಜಾಂಚಿ ಮನ್ಸೂರ್ ಅಹ್ಮದ್ ವಂದಿಸಿದರು. ಬಿಸಿಸಿಐ ಕಾರ್ಯದರ್ಶಿ ನಿಸಾರ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.