ಉಳ್ಳಾಲ: ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಪ್ರೀತಿ, ವಿಶ್ವಾಸ ಮತ್ತು ಏಕತೆಯಿಂದ ಮುಂದುವರಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವಿದೆ. ಗ್ರಾಮಸ್ಥರಿಗೆ ಗೌರವ ಸಿಗಬೇಕಾದರೆ ಒಗ್ಗಟ್ಟಿನಿಂದ ಜೀವನ ಸಾಗಿಸುವುದು ಮುಖ್ಯವಾಗಿದ್ದು, ಗ್ರಾಮದಲ್ಲಿರುವ ಕಟ್ಟಡಗಳು ಹಾಗೂ ಶ್ರೀಮಂತಿಕೆಯಿಂದ ಗೌರವ ನಿರೀಕ್ಷಿಸಲಾಗದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಪಾವೂರು ಗ್ರಾಮ ಪಂಚಾಯಿತಿಯ ನವೀಕೃತ ಕಟ್ಟಡ ‘ಗ್ರಾಮ ಸೌಧ’ ಶನಿವಾರ ಉದ್ಘಾಟಿಸಿ ಮಾತನಾಡಿದರು.ಗ್ರಾಮಸೌಧ ಕೇವಲ ಕಟ್ಟಡವಲ್ಲ, ಗ್ರಾಮದ ಹೃದಯ. ಕಟ್ಟಡ ನಿರ್ಮಾಣವಾದ ಕೂಡಲೇ ಗ್ರಾಮದ ಅಭಿವೃದ್ಧಿ ಅಥವಾ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅಧಿಕಾರಿಗಳು ಹಾಗೂ ಆಡಳಿತ ವರ್ಗ ಒಟ್ಟಾಗಿ ತಂಡವಾಗಿ ಜನಸಾಮಾನ್ಯರ ಮನಸ್ಸಿಗೆ ನೋವಾಗದಂತೆ ಸೇವೆ ನೀಡುವ ಕಾರ್ಯ ಅಗತ್ಯ. ಇಲ್ಲೂ ಹೊರಜಿಲ್ಲೆಯವರು ಬಂಡವಾಳ ಹೂಡುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ರಫೀಕ್ ಅಂಬ್ಲಮೊಗರು ಮಾತನಾಡಿ, ಪಾವೂರು ಗ್ರಾಮಕ್ಕೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲೇ ೧೪೩ ಅರ್ಜಿಗಳ ಪೈಕಿ ೧೦೩ ಫಲಾನುಭವಿಗಳಿಗೆ ಯೋಜನೆ ಲಭಿಸಿದ್ದು ೫.೫೦ಕೋಟಿ ರೂ. ಅನುದಾನ ಗ್ರಾಮಕ್ಕೆ ನೀಡಲಾಗಿದೆ. ಯಾರು ನಮ್ಮ ಪರವಾಗಿ ನಿಲ್ಲುತ್ತಾರೋ ಅವರ ಜೊತೆ ನಿಲ್ಲುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೆಹರುನ್ನಿಸಾ, ಸದಸ್ಯರಾದ ವಲೇರಿಯನ್ ಡಿಸೋಜ, ಖಮರುನ್ನಿಸಾ, ದಯಾನಂದ ಕಿಲ್ಲೂರು, ರಿಯಾಝ್ ಅಹ್ಮದ್, ಇಕ್ಬಾಲ್ ಇನೋಳಿ, ರಿಝ್ವಾನ್, ಚೆನ್ನಮ್ಮ, ಖತೀಜಾ ಬಾನು, ರವಿಕಲಾ, ಪುಷ್ಪಾ, ಚಂದ್ರಾವತಿ, ಮಂಗಳೂರು ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾ ಪಂಚಾಯತ್ನ ಸಹಾಯಕ ಅಭಿಯಂತರ ನಿಖಿಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನಿತಾ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಸಿಂಪಿಗೇರ ಸ್ವಾಗತಿಸಿದರು. ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಇಸ್ಮಾಯಿಲ್ ಎಂ. ವಂದಿಸಿದರು.


