ಉಳ್ಳಾಲ: ಯಾವುದೇ ಉನ್ನತ ವ್ಯಾಸಾಂಗ ಮಾಡುವುದಾದರೂ ಊಟ ಅನಿವಾರ್ಯ. ಹಾಗಾಗಿ ಅಕ್ಕಿಯ ಬೆಳೆಸುವ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ತಳಮಟ್ಟದ ಕಾರ್ಯವಾದರೂ ಕೃಷಿ ಕಾಯಕದ ಕುರಿತು ಸ್ವಲ್ಪವಾದರೂ ತಿಳಿದಿರಬೇಕು. ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೃಷಿ ಹೇಗೆ ಆಗುತ್ತದೆ ಅನ್ನುವುದರ ಅರಿವು ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಬೇಕು ಎಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಂಜೀವ ಪಿಲಾರ್ ಹೇಳಿದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ, ಮಾಧ್ಯಮ ಕೇಂದ್ರ ಉಳ್ಳಾಲ, ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು, ದ. ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಜಂಟಿ ಆಶ್ರಯದಲ್ಲಿ ವಿಧಾನಸಭಾಧ್ಯಕ್ಷರು ಹಾಗೂ ಕೃಷಿ ಸಚಿವರ ಭಾಗವಹಿಸುವಿಕೆಯಲ್ಲಿ ಆ. 30 ರಂದು ನಡೆಯುವ 4 ಎಕರೆ ಹಡಿಲು ಭೂಮಿ ಕೃಷಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರು ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಉಳ್ಳಾಲದ ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮರದಲ್ಲಿ ಆಗುವ ಕುರಿತು ವಿದ್ಯಾರ್ಥಿಗಳಲ್ಲಿ ಗೊಂದಲವಿತ್ತು. ಆದರೆ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ ನಗರ ಪ್ರದೇಶದ ವಿದ್ಯಾರ್ಥಿಗಳ ಅರಿವಿಗೆ ಬಂದಿದೆ . ಬ್ಯಾಂಕ್ ಹಾಗೂ ಮಾಧ್ಯಮದವರು ಲಾಭದ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿಲ್ಲ, ವಿದ್ಯಾರ್ಥಿಗಳಲ್ಲಿ ಕೃಷಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ. ಆ.೩೦ ಸ್ಪೀಕರ್ ಯು.ಟಿ.ಖಾದರ್ ಸಮಾರಂಭ ಉದ್ಘಾಟಿಸಲಿದ್ದಾರೆ, ಹಳ್ಳಿಗೆ ಕೃಷಿ ಮಂತ್ರಿಯನ್ನು ಕರೆಸುವ ಭರವಸೆ ನೀಡಿದ್ದಾರೆ. ಆ.೩೦ ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಕೃಷಿ ಚಟುವಟಿಕೆ ಹಾಗೂ ಆ.೩೧ ರಂದು ಗದ್ದೆಯಲ್ಲಿ ಕ್ರೀಡಾಕೂಟಗಳು ಜರಗಲಿದೆ. ವಿದ್ಯಾರ್ಥಿಗಳು ಕೆಲಸ ಮಾಡಿದ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸಿ ಹೊಸ ಅಕ್ಕಿ ಊಟ ಮಾಡುವ ಕಾರ್ಯದವರೆಗೂ ಮುನ್ನಡೆಸಲಿದ್ದೇವೆ ಎಂದರು.

ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಸವಿತಾ ಮಾತನಾಡಿ, ಗದ್ದೆ ಕೆಲಸದಲ್ಲಿ ತೊಡಗಲು ಕೆ.ಪಾಂಡ್ಯರಾಜ್ ಬಲ್ಲಾಳ್ ಕಾಲೇಜು ಕೊಟ್ಟ ಅವಕಾಶಕ್ಕೆ ಅಭಿನಂದನೆಗಳು. ಗದ್ದೆಗೆ ಹೋಗಲಿದೆ ಅನ್ನುವಾಗ ವಿದ್ಯಾರ್ಥಿಗಳು ಉತ್ಸಾಹದಿಂದ ಒಪ್ಪಿಕೊಂಡರು, ಗದ್ದೆಯಲ್ಲಿ ಕೆಲಸವಿದೆ ಅನ್ನುವಾಗ ಕೆಲವರು ಹಿಂದೆ ಸರಿದಿದ್ದರು. ಆದರೆ ಇಂದು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಅನುಭವ ಸಂಪಾದಿಸಿಕೊಂಡಿದ್ದಾರೆ. ಗೌರವಯುತವಾದ ಕಾರ್ಯ , ತರಗತಿಯಿಂದ ಹೊರಬಂದ ವಾತಾವರಣ ಖುಷಿಯನ್ನು ನೀಡಿದೆ ಎಂದರು.
ಕೃಷಿ ಕಾಯಕದಲ್ಲಿ 35 ವಿದ್ಯಾರ್ಥಿಗಳು ತೊಡಗಿಸಿಕೊಂಡರು.
ಈ ಸಂದರ್ಭ ಈಶ್ವರ್ ಶೆಟ್ಟಿ ಪಿಲಾರು ಮೇಲ್ಮನೆ, ಲವೀಶ್ ಶೆಟ್ಟಿ ಪಿಲಾರು ಮೇಲ್ಮನೆ ಉಪಸ್ಥಿತರಿದ್ದರು.
ಪತ್ರಕರ್ತೆ ಸುಷ್ಮಿತಾ ಸಾಮಾನಿ ನಿರೂಪಿಸಿ ವಂದಿಸಿದರು.