ಮಂಗಳೂರು, ಫೆ.18: ರಾಷ್ಟೀಯ ಹಬ್ಬಗಳ ಸಂದರ್ಭ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯಕ್ರಮ ಜರಗಿಸುವಾಗ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಷ್ಠಾಚಾರ, ಪಥ ಸಂಚಲನೆ, ಗೌರವ ರಕ್ಷೆ ಸ್ವೀಕೃತಿ, ಧ್ವಜಾರೋಹಣ, ಒಗ್ಗೂಡುವಿಕೆ ಇತ್ಯಾದಿ ವಿಚಾರಗಳ ಬಗ್ಗೆ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಏಕ ರೂಪತೆ ತಂದು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಹಾಗೂ ಕಾರ್ಯಕ್ರಮಗಳು ಸರಕಾರ ನಿಗದಿಪಡಿಸಿದ ಶಿಷ್ಠಾಚಾರದಂತೆ ನಡೆಸುವ ಸಲುವಾಗಿ ಏರ್ಪಡಿಸಲಾದ ಮೀಫ್ ವಿದ್ಯಾರ್ಥಿಗಳ ಪಥ ಸಂಚಲನಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.

ಮೀಫ್‌ನ 85 ವಿದ್ಯಾ ಸಂಸ್ಥೆಗಳ ಧೈಹಿಕ ಶಿಕ್ಷಕರಿಗೆ ಕಳೆದ ನವೆಂಬರ್‌ನಲ್ಲಿ ಧೈಹಿಕ ಶಿಕ್ಷಣ ಇಲಾಖೆಯ ಪರಿಣಿತರಿಂದ ತರಬೇತಿ ನೀಡಲಾಗಿತ್ತು. ಈ ತರಬೇತಿಯಲ್ಲಿ ನೀಡಲಾದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ ಮಂಗಳೂರು ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್, ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ, ಮುಡಿಪುವಿನ ಝೆನಿತ್ ಆಂಗ್ಲ ಮಾಧ್ಯಮ ಶಾಲೆ, ಉಡುಪಿ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆ, ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ, ಮೂಲ್ಕಿಯ ಎಂ.ಸಿ.ಟಿ. ಪಬ್ಲಿಕ್ ಸ್ಕೂಲ್, ಬಂಟ್ವಾಳ ರಝಾ ನಗರದ ಬುರೂಜ್ ಆಂಗ್ಲ ಮಾಧ್ಯಮ ಶಾಲೆ, ಜೋಕಟ್ಟೆಯ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ, ತೊಕ್ಕೊಟ್ಟು ಬಬ್ಬುಕಟ್ಟೆಯ ಹಿರಾ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು.
ಆಯ್ಕೆ ಸಮಿತಿಯು ಈ ಚಿತ್ರೀಕರಣಗಳನ್ನು ಪರಿಶೀಲಿಸಿ ಅಂತಿಮವಾಗಿ ಉಭಯ ಜಿಲ್ಲಾ ಮಟ್ಟಗಳಲ್ಲಿ ಉಡುಪಿ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ಮುಡಿಪುವಿನ ಝೆನಿತ್ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ)ಗೆ ಬಹುಮಾನ ಘೋಷಿಸಿದೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


