
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಅಲುಮ್ನಿ ಅಸೋಸಿಯೇಷನ್ “ಮಾ”ವತಿಯಿಂದ ಮಂಗಳೂರು ವಿವಿ ಕ್ಯಾಂಪಸ್ ನಲ್ಲಿ ನಿರ್ಮಾಣಗೊಳ್ಳಲಿರುವ
ಮಾ-ಉದ್ಯಾನವನ’ಕ್ಕೆ ಭೂಮಿಪೂಜೆ ಕಾರ್ಯಕ್ರಮ ಗುರುವಾರ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರು ಶಿಲಾನ್ಯಾವನ್ನು ನೆರವೇರಿಸಿ ಮಾತನಾಡಿ, ‘ಮಾ-ಉದ್ಯಾನವನ’ ಯೋಜನೆಯು ಹಸಿರು ಹಾಗೂ ಪರಿಸರ ಜಾಗೃತಿಯನ್ನು ಉತ್ತೇಜಿಸುವಲ್ಲಿ ಹಳೆಯ ವಿದ್ಯಾರ್ಥಿಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಒಂದು ಅರ್ಥಪೂರ್ಣ ಪರಂಪರೆಯನ್ನು ಬಿಟ್ಟು ಹೋಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಾ ಕಾರ್ಯದರ್ಶಿ ಹಾಗೂ ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಎ. ಎಂ. ಖಾನ್ ಅವರು ಮಾತನಾಡಿ, ಮಾ ವತಿಯಿಂದ ಈಗಾಗಲೇ ಕ್ಯಾಂಪಸ್ ನಲ್ಲಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ನಡೆಸಲಾಗಿದೆ. ಇದೀಗ ಭವಿಷ್ಯದ ಪೀಳಿಗೆಗೆ ಹಸಿರು ಪರಂಪರೆ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಈ ಯೋಜನೆಯು ಸುಸ್ಥಿರ ಮತ್ತು ಪರಿಸರ ಸ್ನೇಹಿ ಕ್ಯಾಂಪಸ್ ವಾತಾವರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.
‘ಮಾ’ ಗೌರವ ಅಧ್ಯಕ್ಷರಾದ ದಿನೇಶ್ ಕುಮಾರ್ ಆಳ್ವ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ‘ ಮಾ ‘ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಹಳೆ ವಿದ್ಯಾರ್ಥಿಗಳು, ಬೋಧಕರು, ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಭಾಗವಹಿಸಿದ್ದರು.
ಪ್ರಾಧ್ಯಾಪಕರಾದ ಪ್ರೊ. ಜಯಪ್ಪ ಅವರು ಸ್ವಾಗತಿಸಿದರು. ಉಮಪ್ಪ ಪೂಜಾರಿ ವಂದಿಸಿದರು.ಡಾ.ಚಂದ್ರು ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಹಸಿರು ಉಪಕ್ರಮದ ಸಂಕೇತವಾಗಿ ಕಾರ್ಯಕ್ರಮದ ಭಾಗವಾಗಿ ಹಣ್ಣು ಬಿಡುವ ಸಸಿಗಳನ್ನು ನೆಡಲಾಯಿತು.