
ಉಳ್ಳಾಲ: ಸಾರ್ವಜನಿಕರ ಜೀವಕ್ಕೆ ಕಂಟಕವಾಗಿರುವ ಬೀದಿ ನಾಯಿಗಳನ್ನು ನಿಗ್ರಹಿಸಲು ತಕ್ಷಣ ಕ್ರಮ ಜರುಗಿಸುವಂತೆ ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ಪೌರಾಯುಕ್ತರನ್ನು ಆಗ್ರಹಿಸಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಗೊಳಪಟ್ಟ 31 ವಾರ್ಡ್’ಗಳಲ್ಲಿ ಬೀದಿ ನಾಯಿಗಳ ಉಪಟಳದಿಂದಾಗಿ ಸಣ್ಣ ಮಕ್ಕಳನ್ನೊಳಗೊಂಡಂತೆ ವಿದ್ಯಾರ್ಥಿಗಳು, ಮಹಿಳೆಯರು, ವಯೋ ವೃದ್ಧರು, ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊದ್ದುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ನಿಯೋಗ ಅಧ್ಯಕ್ಷರಾದ ತನ್ವಿರ್ ಉಳ್ಳಾಲ ಅವರ ನೇತೃತ್ವದಲ್ಲಿ ಪೌರಾಯುಕ್ತರನ್ನು ಭೇಟಿಯಾಗಿ ತಕ್ಷಣ ಬೀದಿ ನಾಯಿಗಳನ್ನು ನಿಗ್ರಹಿಸಲು ಅಗತ್ಯ ಕ್ರಮ ಜರುಗಿಸಲು ಆಗ್ರಹಿಸಿದೆ.
ಉಳ್ಳಾಲ ನಗರ ಸಭಾ ವ್ಯಾಪ್ತಿಗೊಳಪಟ್ಟ ತೊಕ್ಕೊಟು,ಒಳಪೇಟೆ, ಕಲ್ಲಾಪು, ಪಟ್ಲ, ಮಾಸ್ತಿಕಟ್ಟೆ, ಸುಂದರಿ ಬಾಗ್, ಮುಕ್ಕಚೇರಿ, ಅಬ್ಬಕ್ಕ ಸರ್ಕಲ್ ಸೇರಿದಂತೆ ಹಲವೆಡೆ ಬೀದಿ ನಾಯಿಗಳ ಉಪಟಳ ಮಿತಿಮೀರಿದ್ದು, ಶಾಲಾ ಕಾಲೇಜುಗಳಿಗೆ, ಮದ್ರಸಗಳಿಗೆ, ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಭಕ್ತರಿಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಉಳ್ಳಾಲ ನಗರಸಭಾ ಅಧಿಕಾರಿಗಳು ತಕ್ಷಣ ಎಚ್ಛೆತ್ತುಕೊಂಡು ಬೀದಿ ನಾಯಿಗಳ ನಿಗ್ರಹಕ್ಕೆ ಕ್ರಮ ಜರುಗಿಸಲು ಎಸ್ಡಿಪಿಐ ಈ ಮೂಲಕ ಆಗ್ರಹಿಸಿದೆ.
ಪ್ರಸಕ್ತ ನಿಯೋಗದಲ್ಲಿ ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ತನ್ವಿರ್ ಉಳ್ಳಾಲ, ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಕಲ್ಲಾಪು, ಎಸ್ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಸದಸ್ಯ ಅಬ್ಬಾಸ್ ಎ. ಆರ್, ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ಮುಖಂಡರಾದ ಸಬೀಲ್ ಅಹ್ಮದ್ ಉಳ್ಳಾಲ, ನಝೀರ್ ಕೋಟೆಪುರ ಉಪಸ್ಥಿತರಿದ್ದರು.