ಕೊಣಾಜೆ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಮಂಜನಾಡಿ ಮತ್ತು ಡಾ.ಕೆ. ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರ, ನಿಟ್ಟೆ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ಅಂಬುರುಹ ಯಕ್ಷಸದನ ಪ್ರಶಸ್ತಿಯನ್ನು ನಿಟ್ಟೆ ವಿವಿಯ ಡಾ. ಕೆ. ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಉಭಯತಿಟ್ಟುಗಳ ಯಕ್ಷಗಾನ ಕಲಾವಿದ “ಯಕ್ಷಗರತಿ” ಶ್ರೀ ಪುಂಡರೀಕಾಕ್ಷ ಉಪಾಧ್ಯಾಯ ಅವರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ರಂಗದ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರು ವಹಿಸಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸವ್ಯಸಾಚಿ ಕಲಾವಿದರು ಅವರು ನಿಜವಾದ ದಶಾವತಾರಿ, ಅವರ ಹೆಸರಿನ ಅಂಬುರುಹ ಪ್ರಶಸ್ತಿ ಪುಂಡರೀಕಾಕ್ಷ ಉಪಾಧ್ಯಾಯರಿಗೆ ದೊರಕಿರುವುದು ಅರ್ಹವಾದದ್ದು ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಪುಂಡರೀಕಾಕ್ಷ ಉಪಾಧ್ಯಾಯರು ಪುರುಷೋತ್ತಮ ಪೂಂಜರ ಪ್ರಸಂಗವೇ ನನ್ನನ್ನು ಬೆಳೆಸಿದ್ದು ಅವರ ಸಾಹಿತ್ಯ ಶ್ರೀಮಂತಿಕೆ ಸದಾ ಅನುಸರಣೀಯ ಎಂದರು.
ಯಕ್ಷಗಾನ ಕಲಾವಿದ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಪುಂಡರೀಕಾಕ್ಷ ಉಪಾಧ್ಯಾಯರ ಬಗ್ಗೆ ಅಭಿನಂದನ ನುಡಿಗಳನ್ನಾಡಿ ಅಂಬುರುಹ – ಪುಂಡರೀಕ ಒಂದೇ ಅರ್ಥವನ್ನು ಬೀರುವ ಪದ. ಈ ಎರಡು ಪದಗಳ ಹಿಂದಿರುವ ಯಕ್ಷಗಾನದ ಶಕ್ತಿ ಯಕ್ಷಗಾನ ಲೋಕವನ್ನು ಬೆಳಗಿಸಿದೆ. ಪುಂಡರೀಕಾಕ್ಷ ಉಪಾಧ್ಯಾಯರು ನಿಜವಾದ ಯಕ್ಷದ್ಯುಮಣಿ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಸಂಸ್ಥೆಯ ಅಧ್ಯಕ್ಷೆ ಶೋಭಾ ಪುರುಷೋತ್ತಮ ಪೂಂಜ ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ತರುವಾಯ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ನೃಪಾಲಸೂಯ’ ಎಂಬ ಆಖ್ಯಾನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ ಮಯೂರ ನಾಯ್ಗ ಸ್ವಾಗತಿಸಿದರು. ಟ್ರಸ್ಟಿ ಪರೀಕ್ಷಿತ ಪೂಂಜ ಪ್ರಾರ್ಥಿಸಿದರು. ಪ್ರತಿಷ್ಠಾನದ ಸದಸ್ಯೆ ಚೈತ್ರಾ ಪರೀಕ್ಷಿತ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೀವಿತ್ ಎಸ್ ಕೆ ಪೆರಾಡಿ ಕಾರ್ಯಕ್ರಮ ನಿರೂಪಿಸಿದರು.


