
ಮುಂಬಯಿ: ಈ ವರ್ಷ ಬ್ರಹ್ಮಕಲಶೋತ್ಸವವು ನಡೆಯಲಿರುವ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ನೂತನ ಆಡಳಿತ ಮುಕ್ತೇಸರರಾಗಿ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷರೂ ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರೂ ಆಗಿರುವ ಶ್ರೀ ಚಂದ್ರಶೇಖರ ಬೆಳ್ಚಡ, ಕಟೀಲು ಅವರು ಆಯ್ಕೆಯಾಗಿದ್ದಾರೆ. ಹಾಗೆಯೇ, ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಪಂದಿಬೆಟ್ಟು ಮೂಲದ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀ ವಿಶ್ವನಾಥ ಬೆಳ್ಚಡ, ಮುಂದಿಬೆಟ್ಟು, ಉಡುಪಿ ಇವರನ್ನು ಆಯ್ಕೆ ಮಾಡಲಾಗಿದೆ.ಈ ಆಯ್ಕೆಯನ್ನು ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಾಮನ್ ಇಡ್ಯಾ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರು ಮತ್ತು ಅನುವಂಶಿಕ ಮುಕ್ತೇಸರರೂ ಆಗಿರುವ ಶ್ರೀ ಶ್ರೀನಿವಾಸ (ಅಪ್ಪು ಪೂಜಾರಿ) ಅವರು ಅಧಿಕೃತವಾಗಿ ಘೋಷಿಸಿದ್ದಾರೆ.ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದಲ್ಲಿ ಮಾರ್ಚ್ 4 ರಿಂದ 8 ರವರೆಗೆ ಬ್ರಹ್ಮಕಲಶ, ಏಪ್ರಿಲ್ 10 ರಂದು ನಡಾವಳಿ ಮಹೋತ್ಸವ ಮತ್ತು ಏಪ್ರಿಲ್ 11 ರಿಂದ ಒಂದು ವಾರಗಳ ಕಾಲ ಭರಣಿ ಮಹೋತ್ಸವವು ನಡೆಯಲಿದೆ. ನೂತನ ಆಡಳಿತ ಮುಕ್ತೇಸರ ಹಾಗೂ ಉಪಾಧ್ಯಕ್ಷರ ಸಮರ್ಥ ಮುಂದಾಳತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿವೆ ಎಂದು ಎಳೂರ ಗುರಿಕಾರರು ಹಾಗೂ ದೇವಸ್ಥಾನದ ಟ್ರಸ್ಟಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.