ಮಂಗಳೂರು: ಯುನಿವೆಫ್ ಕರ್ನಾಟಕ ವತಿಯಿಂದ 21ನೇ ಸೀರತ್ ಅಭಿಯಾನ–2026ರ ಉದ್ಘಾಟನಾ ಸಮಾರಂಭ ಜಮೀಅತುಲ್ ಫಲಾಹ್ ಹಾಲ್ ನಲ್ಲಿ ನಡೆಯಿತು.

“ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಸಂದೇಶದೊಂದಿಗೆ ನಡೆಯಲಿರುವ ಸೀರತ್ ಅಭಿಯಾನವನ್ನು ಖಾಝಿ ಮೌಲಾನಾ ಶೇಖ್ ಮುಫ್ತಿ ಮುಸ್ತಫಾ ಹುಸೈನ್ ಖಾಸಿಮಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಆದರ್ಶ ಮತ್ತು ಮಾನವೀಯ ಸಂದೇಶಗಳನ್ನು ಸಮಾಜಕ್ಕೆ ಪರಿಚಯಿಸುವುದು ಸೀರತ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಪ್ರವಾದಿಯವರ ಜೀವನ ಸಂದೇಶವನ್ನು ಅರಿತು, ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸೌಹಾರ್ದತೆ, ಸಹೋದರತ್ವ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಕುರಿತು ಪ್ರವಾದಿ ಮುಹಮ್ಮದ್ (ಸ) ಅವರು ನೀಡಿದ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಯುವಜನತೆ ಪ್ರವಾದಿಯವರ ಜೀವನವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ನಬೀಲ್ ಶಾಬಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಚಾಲಕ ಶೇಖ್ ಹಫೀಝ್ ಕಾರ್ಯಕ್ರಮ ನಿರೂಪಿಸಿದರು.


