ದೇರಳಕಟ್ಟೆ: ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನದ ಹಾಗೂ ಚರಕ ಜಯಂತಿ ಪ್ರಯುಕ್ತ ‘ಸಂಹಿತಾ ವಿಮರ್ಶಾ’ ಎಂಬ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
ಕಣಚೂರು ಡ್ರೋಮ್ ಸಭಾಂಗಣದಲ್ಲಿ ನಡೆಯಿತು.

ರಾಷ್ಟ್ರೀಯ ಆಯುರ್ವೇದ ದಿನದ ಪ್ರಯುಕ್ತ ‘ಸಂಹಿತಾ ವಿಮರ್ಶಾ’ ಎಂಬ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ
ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹಾಜಿ ಯು.ಕೆ ಮೋನು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಮ್ಮ ಪ್ರಾಚೀನ ಆಯುರ್ವೇದ ಸಂಹಿತೆಗಳಲ್ಲಿ ಅಪಾರವಾದ ವೈದ್ಯಕೀಯ ಜ್ಞಾನ ಅಡಗಿದೆ. ಆ ಜ್ಞಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ, ಆಧುನಿಕ ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವುದು ಅತ್ಯಂತ ಅಗತ್ಯ.
ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಂಶೋಧನೆ ಮತ್ತು ಸೇವೆಯ ಮೂಲಕ ಸಮಾಜದ ಆರೋಗ್ಯವನ್ನು ಸುಧಾರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ,
ಮೈಸೂರಿನ ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ ವಿಭಾಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಶ್ರೀವತ್ಸ,
ಕೇರಳದ ಕೊಟ್ಟಕ್ಕಲ್ ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ ವಿಭಾಗ ವಿಪಿಎಸ್ವಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಭಾಗ ಮುಖ್ಯಸ್ಥ ಡಾ. ವಿನೋದ್ಕುಮಾರ್ ಎಂ. ವಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಸಿಕೊಟ್ಟರು.

ಕಣಚೂರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ನಿರ್ದೇಶಕ ಅಬ್ದುಲ್ ರಹಿಮಾನ್
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆಯುರ್ವೇದವು ನಮ್ಮ ದೇಶದ ಅತ್ಯಂತ ಪ್ರಾಚೀನ ಹಾಗೂ ವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳಲ್ಲಿ ಒಂದಾಗಿದೆ. ಚರಕ ಸಂಹಿತೆ ಸೇರಿದಂತೆ ನಮ್ಮ ಪ್ರಾಚೀನ ಗ್ರಂಥಗಳಲ್ಲಿರುವ ಜ್ಞಾನವನ್ನು ಇಂದಿನ ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವ ಅಗತ್ಯವಿದೆ.
ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಂಶೋಧಕರಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಇದಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ಸಂಶೋಧನೆ ಮತ್ತು ವೈದ್ಯಕೀಯ ಸೇವೆಗಳನ್ನು ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಕಣಚೂರು ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.
ಕಣಚೂರು ಫಾರ್ಮಸಿ ಕಾಲೇಜ್ ಕಾಲೇಜಿನ ಪ್ರಾಂಶುಪಾಲ ಡಾ. ರಾಜಿವ್ ಕುಮಾರ್
ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಣಚೂರು ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ವಿದ್ಯಾಪ್ರಭಾ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಸುರೇಶ್ ನೆಗಳಗುಳಿ ವಂದಿಸಿದರು.
ಶಾಲಾಕ್ಯ ತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀನಮಂಜು ಶೆಟ್ಟಿ ಹಾಗೂ
ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಂಜಲಿ ಶೇಖರ್ ಕಾರ್ಯಕ್ರಮ ನಿರೂಪಿಸಿದರು.


