ಮಂಗಳೂರಿನ ಸಚಿವ ಸಂಪುಟ ಸಭೆ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಐತಿಹಾಸಿಕ ಅವಕಾಶ

Date:

✍️ಕೆ.ಎ.ಅಬ್ದುಲ್ ಅಝೀಝ್ ಪುಣಚ
(ಹವ್ಯಾಸಿ ಪತ್ರಕರ್ತ)

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರಕಾರ 2026ರ ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿರುವುದು ಕರಾವಳಿ ಕರ್ನಾಟಕದ ಜನರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ.

ಸಾಮಾನ್ಯವಾಗಿ ನಾಡಿನ ಅಭಿವೃದ್ಧಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುತ್ತದೆ.
ಆದರೆ ಅದರೊಂದಿಗೆ ಕರಾವಳಿ ಪ್ರದೇಶದಲ್ಲಿ ಶಾಶ್ವತ ಶಾಂತಿ ನೆಲೆಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು.
ಈಗಾಗಲೇ ಪ್ರಸ್ತಾಪಿಸಲಾಗಿರುವ ಆಂಟಿ ಕಮ್ಯುನಲ್ ವಿಂಗ್ ಗೆ ಅಧಿಕೃತ ಚಾಲನೆ ನೀಡಿ ಪ್ರತಿ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಹೊಸ ಸಮಿತಿಗಳನ್ನು ರಚಿಸಿ,ಧಾರ್ಮಿಕ, ಸಾಮಾಜಿಕ, ರಾಜಕೀಯ,ಶೈಕ್ಷಣಿಕ ಕ್ಷೇತ್ರ ಮತ್ತು ನಾಗರಿಕರನ್ನೊಳಗೊಂಡ ಸಂಘಟನೆ ನಾಡಿನ ಭಾವೈಕ್ಯತೆಯ ಹೆಬ್ಬಾಗಿಲಿನಂತೆ ಕಾರ್ಯಾಚರಣೆ ಮಾಡಲು ಅಗತ್ಯ ಆಡಳಿತಾತ್ಮಕ ನೆರವು ಮತ್ತು ಅಧಿಕಾರವನ್ನು ನೀಡುವ ಕುರಿತು ಯೋಜನೆ ರೂಪಿಸಬೇಕಾದದ್ದು ವರ್ತಮಾನ ಕಾಲದ ಅಗತ್ಯವಾಗಿದೆ.

ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಯವರು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಆರ್ಥಿಕತೆ, ಬಂದರು, ಮೀನುಗಾರಿಕೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡುತ್ತಿವೆ.
ಆದರೂ ಈ ಪ್ರದೇಶದ ಹಲವು ದೀರ್ಘಕಾಲೀನ ಸಮಸ್ಯೆಗಳಿಗೆ ಇನ್ನೂ ಸಮಗ್ರ ಪರಿಹಾರ ಲಭಿಸಿಲ್ಲ ಎನ್ನುವುದು ವಾಸ್ತವ.
ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆ ಕೇವಲ ಕೆಲವು ಯೋಜನೆಗಳಿಗೆ ಅನುದಾನ ಘೋಷಿಸುವ ಸಭೆಯಾಗದೆ, ಕರಾವಳಿಗೆ ಪ್ರತ್ಯೇಕ ದೀರ್ಘಕಾಲೀನ ಅಭಿವೃದ್ಧಿ ದೃಷ್ಟಿಕೋನ ರೂಪಿಸುವ ಸಭೆಯಾಗಿ ಮೂಡಿ ಬರಬೇಕು.

ಕರಾವಳಿ ಜಿಲ್ಲೆಗಳಿಗೆ ಪ್ರತಿವರ್ಷ ಪ್ರತ್ಯೇಕ ಬಜೆಟ್ ಮೀಸಲಿಟ್ಟು, ರಸ್ತೆ, ಸೇತುವೆ, ಕುಡಿಯುವ ನೀರು, ಪ್ರವಾಸೋದ್ಯಮ, ಮೀನುಗಾರಿಕೆ, ಬಂದರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಯೋಜಿತವಾಗಿ ಹಣ ವಿನಿಯೋಗಿಸುವ ಬಗ್ಗೆ ಸಮಗ್ರ ಚರ್ಚೆಯಾಗಬೇಕು.

ಜಿಲ್ಲಾವಾರು ಸಣ್ಣಪುಟ್ಟ ಯೋಜನೆಗಳ ಬದಲಿಗೆ ಮುಂದಿನ 10–20 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಯೋಜನೆ ರೂಪಿಸಿದರೆ ಕರಾವಳಿ ಪ್ರದೇಶದ ಜನರ ಬಹುಕಾಲದ ಕನಸು ನನಸಾದಂತಾಗುತ್ತದೆ.

ಕರ್ನಾಟಕದ ಸುಮಾರು 350 ಕಿ.ಮೀ. ಕರಾವಳಿ ಪ್ರದೇಶವನ್ನು ಪರಿಸರ ಸ್ನೇಹಿ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಸರ್ಕಾರ ಈಗಾಗಲೇ ವ್ಯಕ್ತಪಡಿಸಿದೆ.
ಸಚಿವ ಸಂಪುಟದಲ್ಲಿ Coastal Tourism Policyಗೆ ಅಂತಿಮ ರೂಪ ನೀಡುವುದು ಪ್ರಮುಖ ವಿಷಯವಾಗಬೇಕು. ಕಡಲತೀರಗಳು, ನದಿಗಳು, ಹಿನ್ನೀರು ಪ್ರದೇಶಗಳು, ಕೋಟೆಗಳು, ಧಾರ್ಮಿಕ ಕೇಂದ್ರಗಳು,ಬೀಚ್ ಪ್ರವಾಸೋದ್ಯಮ ಮತ್ತು ಸ್ಥಳೀಯ ಆಹಾರ ಸಂಸ್ಕೃತಿಯನ್ನು ಒಗ್ಗೂಡಿಸಿ ಪ್ರವಾಸೋದ್ಯಮ ನೀತಿ ರೂಪಿಸಬೇಕು.
ಈಗಾಗಲೇ ಕೊಡಿಕಲ್–ತಣ್ಣೀರುಬಾವಿ ಸೇರಿದಂತೆ ಕರಾವಳಿಯ ಕೆಲವು ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಕ್ರಮಗಳು ಭರದಿಂದ ನಡೆಯುತ್ತಿವೆ.

ಮಂಗಳೂರಿನ ನಗರೀಕರಣ ವೇಗವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ.
ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವುದು
ಹೊಸ ಫ್ಲೈಓವರ್‌ಗಳು ಮತ್ತು ಮೇಲ್ಸೇತುವೆ,
ರಿಂಗ್ ರೋಡ್ ಯೋಜನೆ
ಸಾರ್ವಜನಿಕ ಸಾರಿಗೆ ಬಲಪಡಿಸುವುದು,
ಮಂಗಳೂರು ನಗರ ಮತ್ತು ವಿಮಾನ ನಿಲ್ದಾಣ ನಡುವೆ ಸಂಪರ್ಕ ಸುಧಾರಣೆಗೆ
ಕಾಲಮಿತಿಯೊಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಕರಾವಳಿಯ ಕೈಗಾರಿಕೆ, ಪ್ರವಾಸೋದ್ಯಮ ಮತ್ತು ವಿದೇಶಿ ಸಂಪರ್ಕಕ್ಕೆ ವಿಮಾನ ನಿಲ್ದಾಣ ಅತ್ಯಂತ ಮುಖ್ಯ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ, ದೊಡ್ಡ ವಿಮಾನಗಳ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ, ಹೆಚ್ಚುವರಿ ಅಂತಾರಾಷ್ಟ್ರೀಯ ಸಂಪರ್ಕ ಮತ್ತು ಕಾರ್ಗೋ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ದಿಷ್ಟ ನಿರ್ಧಾರ ಕೈಗೊಳ್ಳಬೇಕು.
ರನ್‌ವೇ ವಿಸ್ತರಣೆಗೆ ಭೂಸ್ವಾಧೀನದ ವಿಚಾರ ಈಗಾಗಲೇ ಚರ್ಚೆಯಲ್ಲಿದೆ‌.

ಮಂಗಳೂರು ಬಂದರು ಕರಾವಳಿಯ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ.
ಬಂದರು ಆಧಾರಿತ ಕೈಗಾರಿಕೆ, ಲಾಜಿಸ್ಟಿಕ್ಸ್ ಮತ್ತು ರಫ್ತು– ಆಮದು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಕೇಂದ್ರ ಸರಕಾರದ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ ಕರಾವಳಿ ಆರ್ಥಿಕ ವಲಯವು ಬಂದರು ಆಧಾರಿತ ಕೈಗಾರಿಕಾ ಅಭಿವೃದ್ಧಿಯ ಭಾಗವಾಗಿದೆ.
ಮಂಗಳೂರಿನಲ್ಲಿ ವಾಟರ್ ಮೆಟ್ರೋ,ಕ್ರೂಸ್ ಪ್ರವಾಸೋದ್ಯಮ ಹಾಗೂ ನದಿ ಜಲಸಾರಿಗೆ ಅಭಿವೃದ್ಧಿಗೆ ರಾಜ್ಯದ ನೀತಿಯಲ್ಲಿ ಅವಕಾಶಗಳಿವೆ.

ಪ್ರತಿ ಮಳೆಗಾಲದಲ್ಲಿ ಕರಾವಳಿಯ ಜನರು ಎದುರಿಸುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಸಮುದ್ರ ಕೊರೆತವೂ ಒಂದಾಗಿದೆ.
ಕಡಲ್ಕೊರೆತದಿಂದ ಮನೆಗಳು, ರಸ್ತೆಗಳು, ಕೃಷಿಭೂಮಿ ಮತ್ತು ಮೀನುಗಾರಿಕಾ ಪ್ರದೇಶಗಳು ಅಪಾಯಕ್ಕೆ ಒಳಗಾಗುತ್ತಿವೆ. ಆದ್ದರಿಂದ ತಾತ್ಕಾಲಿಕ ಕಲ್ಲು ಹಾಕುವ ಕ್ರಮಗಳ ಬದಲಿಗೆ ವೈಜ್ಞಾನಿಕ Shoreline Management Plan ಆಧಾರದಲ್ಲಿ ಶಾಶ್ವತ ಪರಿಹಾರ ರೂಪಿಸಬೇಕು.
ರಾಜ್ಯದ ದಾಖಲೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ DPR ಸಿದ್ಧಪಡಿಸಿ ಹಂತ ಹಂತವಾಗಿ ಸಮುದ್ರ ಕೊರೆತ ನಿಯಂತ್ರಣ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆ ಉಲ್ಲೇಖಿಸಲಾಗಿದೆ.

ಕರಾವಳಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರರಿಗೆ ವಿಶೇಷ ಯೋಜನೆ ಅಗತ್ಯ.
ಮೀನುಗಾರಿಕಾ ಬಂದರುಗಳ ಆಧುನೀಕರಣ, ದೋಣಿಗಳಿಗೆ ಸುರಕ್ಷಿತ ನಿಲುಗಡೆ, ಮೀನು ಸಂಸ್ಕರಣಾ ಘಟಕಗಳು, ಕೋಲ್ಡ್ ಸ್ಟೋರೇಜ್, ಮಾರುಕಟ್ಟೆ ವ್ಯವಸ್ಥೆ ಮತ್ತು ಮೀನುಗಾರರ ಕುಟುಂಬಗಳಿಗೆ ಶಿಕ್ಷಣ,ರೋಗ್ಯ ಸೌಲಭ್ಯಗಳನ್ನು ಬಲಪಡಿಸಬೇಕು.

ಸಮುದ್ರದಲ್ಲಿ ಮೊಬೈಲ್ ಸಂಪರ್ಕ ಸಿಗದ ಪ್ರದೇಶಗಳಲ್ಲಿ ಮೀನುಗಾರರ ಸುರಕ್ಷತೆಗಾಗಿ ಪರ್ಯಾಯ ಸಂವಹನ ವ್ಯವಸ್ಥೆಯ ಅಗತ್ಯವೂ ಇಂದಿನ ಅಗತ್ಯವಾಗಿದೆ.

ಮಂಗಳೂರನ್ನು ಕರಾವಳಿಯ ಶಿಕ್ಷಣ ಮತ್ತು ಆರೋಗ್ಯದ ರಾಜಧಾನಿಯಾಗಿ ಮತ್ತಷ್ಟು ಬಲಪಡಿಸುವುದು ಅಗತ್ಯ. ಸರಕಾರಿ ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯ ಹೆಚ್ಚಿಸಬೇಕು.
ಸರಕಾರಿ ಶಾಲೆ,ಕಾಲೇಜುಗಳಲ್ಲಿ ಮೂಲಸೌಕರ್ಯ, ವಸತಿ ನಿಲಯ, ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ವಿಶೇಷ ಅನುದಾನ ನೀಡಬೇಕು.
ತುಳು ಭಾಷೆಗೆ ಸೂಕ್ತ ಅಧಿಕೃತ ಮಾನ್ಯತೆ ನೀಡುವ ವಿಚಾರ ವಿಶೇಷವಾಗಿ ಚರ್ಚೆಯಾಗಬೇಕು.

ಕರಾವಳಿಯ ಜನರು ಬಹುಕಾಲದಿಂದ ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.
ಇತ್ತೀಚೆಗೆ ಈ ಕುರಿತು ಪರಿಶೀಲನೆಗಾಗಿ ಸಮಿತಿ ರಚಿಸುವ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಭರವಸೆ ದೊರೆತಿದೆ.

ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರದ ಮಟ್ಟದಲ್ಲಿ ಅಗತ್ಯ ಮೂಲಸೌಕರ್ಯ, ಕಟ್ಟಡ ಮತ್ತು ಆಡಳಿತಾತ್ಮಕ ನೆರವು ನೀಡುವ ಕುರಿತು ನಿರ್ಣಯ ಕೈಗೊಳ್ಳುವುದು ಸೂಕ್ತ.
ಕರಾವಳಿಯ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ ಮತ್ತು ವಿದೇಶಗಳಿಗೆ ತೆರಳುವ ಪರಿಸ್ಥಿತಿ ಕಡಿಮೆಯಾಗಬೇಕು. ಮಂಗಳೂರಿನಲ್ಲಿ IT, ITES, ಆಹಾರ ಸಂಸ್ಕರಣೆ, ಮೀನು ಸಂಸ್ಕರಣೆ, ಲಾಜಿಸ್ಟಿಕ್ಸ್, ಸಮುದ್ರ ಆಧಾರಿತ ಕೈಗಾರಿಕಾ ಕ್ಷೇತ್ರಗಳಿಗೆ ವಿಶೇಷ ಕೈಗಾರಿಕಾ ವಲಯಗಳನ್ನು ರೂಪಿಸಬೇಕು.
ಸ್ಥಳೀಯ ಯುವಕರಿಗೆ ಕೌಶಲ್ಯ ತರಬೇತಿ ನೀಡಿ, ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ಸರಕಾರದ ಪ್ರಮುಖ ಗುರಿಯಾಗಬೇಕು.

ಕರಾವಳಿಯ ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ಮತ್ತು ರಸ್ತೆ ನಿರ್ಮಾಣವಲ್ಲ. ಪಶ್ಚಿಮ ಘಟ್ಟ, ನದಿಗಳು, ಕಡಲತೀರ, ಜಲಮೂಲಗಳು ಮತ್ತು ಜೈವವೈವಿಧ್ಯವನ್ನು ಸಂರಕ್ಷಿಸಬೇಕು.
“ಪರಿಸರ ಉಳಿಸಿ ಅಭಿವೃದ್ಧಿ ಸಾಧಿಸಿ” ಎಂಬ ನೀತಿಯಡಿ ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಿಗೆ ಅವಕಾಶ ನೀಡಬೇಕು.

ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಕರಾವಳಿ ಕರ್ನಾಟಕದ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಅವಕಾಶವಾಗಿದೆ. ಈಗಾಗಲೇ ಸರಕಾರವು ಕರಾವಳಿ ಪ್ರವಾಸೋದ್ಯಮ ನೀತಿ ರೂಪಿಸುವ ಹಾಗೂ ಕರಾವಳಿ ಜಿಲ್ಲೆಗಳ ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದೆ ತರುವ ಪ್ರಕ್ರಿಯೆ ಆರಂಭಿಸಿದೆ.
ಆದ್ದರಿಂದ ಈ ಸಭೆಯಲ್ಲಿ ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ನಿಧಿ,
ಪ್ರವಾಸೋದ್ಯಮ ನೀತಿ, ರಸ್ತೆ,ರೈಲು,ವಿಮಾನ,ಜಲಸಾರಿಗೆ ಅಭಿವೃದ್ಧಿ, ಮೀನುಗಾರರ ಕಲ್ಯಾಣ, ಸಮುದ್ರ ಕೊರೆತ ನಿಯಂತ್ರಣ, ಆರೋಗ್ಯ,ಶಿಕ್ಷಣ, ಕೈಗಾರಿಕೆ, ಉದ್ಯೋಗ ಮೊದಲಾದ ಅತ್ಯಗತ್ಯ ವಿಷಯಗಳ ವಿಫುಲೀಕರಣಕ್ಕೆ ಹೊಸ ವೇದಿಕೆಯಾಗಬೇಕು.

ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆ ಕೇವಲ ಒಂದು ಆಡಳಿತಾತ್ಮಕ ಕಾರ್ಯಕ್ರಮವಾಗದೆ, “ಹೊಸ ಕರಾವಳಿ ಅಭಿವೃದ್ಧಿಯ ಘೋಷಣಾಪತ್ರ”ಕ್ಕೆ ಚಾಲನೆ ನೀಡುವ ಐತಿಹಾಸಿಕ ಸಭೆಯಾಗಿ ಮಾರ್ಪಡಬೇಕಿದೆ. ಕರಾವಳಿಗೆ ನೀಡುವ ಅಭಿವೃದ್ಧಿ ಪ್ಯಾಕೇಜ್ ಸಮಗ್ರವಾಗಿರಬೇಕು, ಅನುದಾನ ಸಮರ್ಪಕವಾಗಿರಬೇಕು ಮತ್ತು ಘೋಷಿಸಲಾದ ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಈ ಸಚಿವ ಸಂಪುಟ ಸಭೆಯ ನಿಜವಾದ ಉದ್ದೇಶ ಸಾರ್ಥಕವಾಗಲಿದೆ.
ಜನರ ನಿರೀಕ್ಷೆಗಳಿಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯುವಂತಾದರೆ ಕರಾವಳಿ ಪ್ರದೇಶಕ್ಕೆ ಕರ್ನಾಟಕ ಸರಕಾರ ನೀಡುವ ದೊಡ್ಡ ಕೊಡುಗೆಯಾಗಿ ಅದು ಇತಿಹಾಸದ ಪುಟಗಳಲ್ಲಿ ಸೇರಲಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...