ಬೆಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿರುವ ಮತದಾನದ ಅಧಿಕಾರಕ್ಕೆ ಕುತ್ತು ತರುತ್ತಿರುವ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಮತ್ತು ಏಕಪಕ್ಷೀಯ ಮತದಾರರ ಪಟ್ಟಿ ಕಡಿತದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿಯನ್ನು ಪುರಸ್ಕರಿಸಿ, ದೇಶದ ಅತ್ಯುನ್ನತ ನ್ಯಾಯಾಲಯವು ಚುನಾವಣಾ ಆಯೋಗ (ECI) ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿರುವುದು ಸ್ವಾಗತಾರ್ಹ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಸಂವಿಧಾನಿಕ ಸಂಸ್ಥೆಗಳ ಉತ್ತರದಾಯಿತ್ವವನ್ನು ಎತ್ತಿಹಿಡಿಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SIR (ವಿಶೇಷ ಸಮಗ್ರ ಪರಿಷ್ಕರಣೆ) ಹೆಸರಿನಲ್ಲಿ ದೇಶದಾದ್ಯಂತ ವಿಶೇಷವಾಗಿ ಮಹಿಳೆಯರು, ಅಲ್ಪಸಂಖ್ಯಾತರು, ಶ್ರಮಿಕ ವರ್ಗ ಹಾಗೂ ಹಿಂದುಳಿದ ಸಮುದಾಯಗಳ ಹೆಸರುಗಳನ್ನು ಪಟ್ಟಿಯಿಂದ ಸದ್ದಿಲ್ಲದೆ ತೆಗೆದು ಹಾಕಲಾಗುತ್ತಿರುವುದು ಅತ್ಯಂತ ಗಂಭೀರವಾದದ್ದು.
ಜ್ಞಾನೇಶ್ ಕುಮಾರ್ ಅವರ ನೇತೃತ್ವದ ಆಯೋಗವು ಸುಪ್ರೀಂ ಕೋರ್ಟ್ಗೆ ಸೂಕ್ತ ಹಾಗೂ ಪಾರದರ್ಶಕ ವಿವರಣೆ ನೀಡಬೇಕಿದೆ. ಮತದಾರರ ಹಕ್ಕುಗಳಿಗಾಗಿ ದಿಲ್ಲಿಯಲ್ಲಿ ಹೋರಾಟ ನಡೆಸಿದ ನಾಯಕರ ಮೇಲಿನ ದಬ್ಬಾಳಿಕೆಯನ್ನು ವಿಮೆನ್ ಇಂಡಿಯಾ ಮೂಮೆಂಟ್ ತೀವ್ರವಾಗಿ ಖಂಡಿಸುತ್ತದೆ. ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಕಾನೂನು ಮತ್ತು ಪ್ರಜಾಸತ್ತಾತ್ಮಕ ರಂಗಗಳಲ್ಲಿ ನಡೆಯುವ ಪ್ರತಿಯೊಂದು ನ್ಯಾಯಯುತ ಹೋರಾಟಕ್ಕೂ ನಮ್ಮ ಬೆಂಬಲವಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಅರ್ಹ ಮತದಾರನೂ ತನ್ನ ಹಕ್ಕನ್ನು ಚಲಾಯಿಸುವ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ಮುಂದಿನ ನಡೆ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ನಾವು ನಂಬಿದ್ದೇವೆ ಎಂದು ಅವರು ಹೇಳಿದ್ದಾರೆ.


