ಉಳ್ಳಾಲ: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ಉಳ್ಳಾಲ ವಲಯವು ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಬಲಪಡಿಸುವ ಉದ್ದೇಶದೊಂದಿಗೆ “ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025” ಕಾರ್ಯಕ್ರಮವನ್ನು ಸ.12 ರ ಶುಕ್ರವಾರ ಸಂಜೆ ಏಳು ಗಂಟೆಗೆ ಎಕ್ಕೂರು ಬಳಿ ಇರುವ ಇಂಡಿಯಾನಾ ಕನ್ವೆನ್ಸನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಅಬ್ದುಲ್ ರಹಿಮಾನ್ ಸಾಗರ್ ಹೇಳಿದರು.ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದರು. ಯುಇಎ ಸಂಘಟನೆಯ 21 ವಲಯಗಳ ಯುವಕರನ್ನು ಒಟ್ಟುಗೂಡಿಸಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಸಹಿತ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.

ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 7000 ಕ್ಕೂ ಅಧಿಕ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಯುವ ಪೀಳಿಗೆಯನ್ನು ಒಗ್ಗೂಡಿಸಲು, ಸವಾಲು ನೀಡಲು ಮತ್ತು ಪ್ರೇರೇಪಿಸಲು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ಧ ಒಕ್ಕೂಟವನ್ನು ನಿರ್ಮಿಸಲು ಯುಇಎ ಸಂಘಟನೆ
ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಸಹಿತ ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿದೆ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಯುಇಎಯ ರಾಜ್ಯ ಸಮಿತಿ ಮತ್ತು ಕಾರ್ಯನಿರ್ವಹಣಾ ವಲಯ ಸಮಿತಿಯ
ರಾಜ್ಯಾಧ್ಯಕ್ಷ ಮೊಹಮ್ಮದ್ ಸಿರಾಜುದ್ದೀನ್,ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ಮಿಯಾಜ್ ಅಹ್ಮದ್, ಉಪಾಧ್ಯಕ್ಷ ನಾಸೀರ್ ಅಹ್ಮದ್ ಸಾಮಣಿಗೆ,ಅಬ್ದುಲ್ ರೆಹಮಾನ್ ಯು.ಎ, ಮಂಗಳೂರು ರಿಯಾಝ್ ,ಫಯಝ್ ಪಟ್ಲ, ಅಬ್ದುರಹ್ಮಾನ್ ಚಾಯಬ್ಬ, , ರಿಯಾಝ್ ಹಳೆಕೋಟೆ ಈ ಉಪಸ್ಥಿತರಿದ್ದರು.
