ಉಳ್ಳಾಲ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಅಧೀನದ, ನರಿಂಗಾನಅಲ್ ಮದೀನ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಸಾಂಸ್ಕೃತಿಕ ಕಾರ್ಯಕ್ರಮ “ ಅಲ್ ಮೆಮ್ಸ್ ಆರ್ಟ್ ಕಾರ್ನಿವಲ್ ಜುಬಿಲೋಸೊ-2K25” ಡಿಸೆಂಬರ್ 4 ರಿಂದ 6 ರ ವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ಅಲ್ ಮದೀನ ಸಂಸ್ಥೆಯ ಅಬ್ದುಲ್ ರಝಾಕ್ ಮಾಸ್ಟರ್ ತಿಳಿಸಿದರು.

ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡಿದರು.ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಕಲೆ ಸಂಸ್ಕೃತಿಗಳ ಪೋಷಣೆಯ ಗುರಿಯೊಂದಿಗೆ ನಡೆಯುವ ಈ ‘ ಜುಬಿಲೋಸೊ’ , 150 ಕ್ಕೂ ಹೆಚ್ಚು ವೈವಿಧ್ಯ ವಿಷಯಗಳಲ್ಲಿ, 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು “ಗ್ಲೈಡಿಂಗ್ ಸ್ಟಾರ್ಸ್” ಮತ್ತು “ರೋರಿಂಗ್ ಸ್ಟಾರ್ಸ್” ಎಂಬ ಎರಡು ತಂಡಗಳ ಹೆಸರಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ 6 ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಎಲ್ ಕೆಜಿಯಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ವಾಗಿರುವ ಈ ‘ಜುಬಿಲೋಸೊ’ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ.
ಅಲ್ ಮದೀನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಈ ತ್ರಿದಿನ ಶಾಲಾ ಹಬ್ಬದ ಉದ್ಘಾಟನೆಯು ಡಿಸೆಂಬರ್ 4 ರಂದು ನಡೆಯಲಿದೆ. ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಹಾಜಿ ಅಬ್ದುಲ್ ರಝಾಕ್ ವಿದ್ಯಾನಗರ ಉದ್ಘಾಟಿಸಲಿದ್ದಾರೆ ಎಂದರು. ಡಿಸೆಂಬರ್ 6 ರಂದು ಶನಿವಾರ ಸಾಯಂಕಾಲ 5 ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಜನಾಬ್ ಯು. ಟಿ. ಖಾದರ್ ಉದ್ಘಾಟಿಸಲಿದ್ದಾರೆ.
ಸಾಮಾಜಿಕ ರಾಜಕೀಯ ಮುಖಂಡ ಹಾಜಿ ಎನ್. ಎಸ್ ಕರೀಂ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನವಾಝ್, ಅಬ್ದುಲ್ ಜಲೀಲ್ ಮೋಂಟುಗೋಳಿ ಸಂಸ್ಥೆಯ ಕೋಶಾಧಿಕಾರಿ ಅಬ್ದುಲ್ ಮಜೀದ್ ಹಾಜಿ, ಏಷಿಯನ್ ಬಾವ ಹಾಜಿ. ಕುಂಞಿಬಾವ ಹಾಜಿ ಕಲ್ಕಟ್ಟ, ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ, ವಕ್ಫ್ ಅಧಿಕಾರಿ ಹಾಜಿ ಅಬೂಬಕರ್, ಶೌಕತ್ ಹಾಜಿ ದೇರಳಕಟ್ಟೆ, ಮಹಮ್ಮದ್ ಕುಂಞಿ ಅಮ್ಜದಿ, ಅಬುಸಾಲಿಹ್ ಅಝ್ಹರಿ ಭಾಗವಹಿಸಲಿದ್ದಾರೆ. ಶಾಲಾ ಪ್ರಾಂಶುಪಾಲ ಮನ್ಸೂರ್ ಹಿಮಮಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಆಯೋಜನೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಶಕ್ತಿಮೀರಿ ದುಡಿಯುತ್ತಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಶಾಲಾ ಮದರಸ ಮುಖ್ಯ ಅಧ್ಯಾಪಕ ಅಬೂಬಕರ್ ಮದನಿ ಪಡಿಕ್ಕಲ್, ಸ್ವಾಗತ ಸಮಿತಿ ಕನ್ವೀನರ್ ಮೊಯ್ದಿನ್ ಕುಂಞಿ ಕಲ್ಕಟ್ಟ, ವೈಸ್ ಕನ್ವೀನರ್ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.


