ಕುತ್ತಾರು: ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದ್ದು, ಸಮಾಜಮುಖಿ ಆರೋಗ್ಯ ಯೋಜನೆಗಳು ಸಾರ್ವಜನಿಕ ಆರೋಗ್ಯದ ಬೆಳವಣಿಗೆಗೆ ನೆರವಾಗುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅಭಿಪ್ರಾಯಪಟ್ಟರು.

ಅವರು ಗ್ರಾಮೀಣ ಭಾಗದ ಜನರಿಗೆ ಹಾಗೂ ದೇಶದಾದ್ಯಂತ ಬರುವ ಭಕ್ತಾಧಿಗಳಿಗೆ ಸಮೀಪದಲ್ಲೇ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ವತಿಯಿಂದ, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಾಗೂ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಆದಿ ಕೊರಗತನಿಯ ದೈವಸ್ಥಾನದ ಸಹಕಾರದಲ್ಲಿ ಸ್ಥಾಪಿಸಲಾಗಿದ ದೆಕ್ಕಾಡು, ಕುತ್ತಾರಿನ ಆದಿಸ್ಥಳ ಸ್ವಾಮಿ ಕೊರಗಜ್ಜ ದೇವಸ್ಥಾನ ಪರಿಸರದಲ್ಲಿ ಆದಿಸ್ಥಳ ಕೊರಗಜ್ಜ ಸೇವಾ ಕ್ಲಿನಿಕ್ ನ ಉದ್ಘಾಟನೆ ನಡೆಸಿ ಮಾತನಾಡಿದರು.

ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಡೀನ್ ಡಾ.ಬಿ. ಸಂದೀಪ್ ರೈ ಅವರು, ಉನ್ನತ ಮಟ್ಟದ ವೈದ್ಯಕೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಈ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಸಂಜೆ ೪ ರಿಂದ ೬ ಗಂಟೆಯವರೆಗೆ ಕಾರ್ಯಾಚರಿಸಲಿದ್ದು, ಚಿಕಿತ್ಸೆ ಜೊತೆಗೆ ಔಷಧಿಯನ್ನು ಉಚಿತವಾಗಿ ಕ್ಲಿನಿಕ್ ನಲ್ಲಿ ಒದಗಿಸಲಾಗುವುದು ಎಂದರು.
ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ, ಸೇವಾ ಕ್ಲಿನಿಕ್ ನಲ್ಲಿ ವೈದ್ಯರಾಗಿರುವ ಡಾ.ಪ್ರಕಾಶ್, ಡೆಪ್ಯುಟಿ ವೈದ್ಯಕೀಯ ಅಧೀಕ್ಷಕ ಡಾ. ಶಿರಾಲ್ ಹೆಗ್ಡೆ, ಡಾ.ಅನಿಲ್ ಸನಿಲ್, ಅರುಣ್ ಪೂಂಜ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಹೇಮಂತ್ ಶೆಟ್ಟಿ , ಶ್ರೀಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ದೈವಸ್ಥಾನದ ಮಹಾಬಲ ಹೆಗ್ಡೆ, ವಿನೋದ್ ಶೆಟ್ಟಿ ಬೊಳ್ಯ, ಮುನ್ನೂರು ಗ್ರಾ.ಪಂ ಉಪಾಧ್ಯಕ್ಷ ಮಹಾಬಲ್ ದೆಪ್ಪೆಲಿಮಾರ್, ಸತೀಶ್ ಮಿತ್ತಗೆಲ, ಮೂಲ್ಯಣ್ಣ ಬಾಲಕೃಷ್ಣ ಮೂಲ್ಯ, ಹರೀಶ್ ಭಂಡಾರಬೈಲ್, ದೈವ ನರ್ತಕ ಮಾಯಿಲ, ಗಣೇಶ್ ಪೂಜಾರಿ, ಮೋನಪ್ಪ ಗೌಡ, ಲಕ್ಷ್ಮಣ್ ಗೌಡ ಹಾಗೂ ದೈವದ ಚಾಕರಿ ವರ್ಗದವರು ಉಪಸ್ಥಿತರಿದ್ದರು.
ಅನುವಂಶಿಕ ಆಡಳಿತ ಮೊಕ್ತೇಸರರ ಕನಸಿನ ಕೂಸಿನ ಯೋಜನೆ
ಶ್ರೀ ಬಿ. ಶ್ರೀಧರ ಶೆಟ್ಟಿ ಮಾಗಣತ್ತಡಿ ಅವರ ಕನಸಿನ ಕೂಸು – ಅಜ್ಜನ ಬಳಿ ಬರುವ ಭಕ್ತಾಧಿಗಳಿಗೆ ಉಚಿತ ಆರೋಗ್ಯ ಸೇವೆ ದೊರಕಬೇಕು, ಗ್ರಾಮಸ್ಥರಿಗೂ ಸಮಾನವಾಗಿ ಉಚಿತ ಚಿಕಿತ್ಸೆ ಸಿಗಬೇಕು ಎಂಬ ಮಹತ್ವದ ಉದ್ದೇಶದಿಂದ, ಕೆ.ಎಸ್ ಹೆಗ್ಡೆ ಆಸ್ಪತ್ರೆ ಆಡಳಿತದೊಂದಿಗೆ ನಿರಂತರವಾಗಿ ಒಂದು ವರ್ಷದ ಕಾಲ ಸಭೆ–ಸಂವಹನಗಳನ್ನು ನಡೆಸಿ ಈ ಸೇವೆಯನ್ನು ಸ್ಥಾಪಿಸಲು ದಾರಿಯಾದವರು. ಈ ಮಹತ್ವಾಕಾಂಕ್ಷಿ ಕಾರ್ಯವು ಸಮಾಜಸೇವೆಯಲ್ಲಿನ ಒಂದು ಉತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದು, ಜನಸಾಮಾನ್ಯರ ಆರೋಗ್ಯ ರಕ್ಷಣೆಯತ್ತ ಮಹತ್ತರ ಹೆಜ್ಜೆಯಾಗಿದೆ.


