ಮೂಡುಬಿದಿರೆ: ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರ (ರಿ.)ಅಲೇರಿ, ಮಿಜಾರು, ಮೂಡಬಿದಿರೆ, ದ.ಕ. ಜಿಲ್ಲೆ ಅಲೇರಿ ಮೂಲಕ್ಷೇತ್ರದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ತುಳುನಾಡಿನಲ್ಲಿ ತುಳುವರಿಗೆ ದೈವ-ದೇವರುಗಳ ಮೇಲೆ ವಿಶೇಷವಾದ ಭಯ, ಭಕ್ತಿ. ಅದರಲ್ಲೂ ಅವರವರ ಕುಲದೈವಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ-ಗೌರವ-ನಂಬಿಕೆ. ಸರ್ವ ತುಳುವರಿಂದ ಆರಾಧಿಸಲ್ಪಡುವ ನೆಲದ ಸತ್ಯದೈವಗಳಲ್ಲಿ ಪ್ರಧಾನವಾದ ಶ್ರೀ ಸತ್ಯ ಸಾರಮಾನಿ ಕಾನದ-ಕಟದರು ತುಳುನಾಡಿನ ಆದಿದ್ರಾವಿಡ–ಸಾರಮಾನಿ ಸಮಾಜದ ಕುಲದೈವಗಳು. ಶ್ರೀ ಸತ್ಯ ಸಾರಮಾನಿ ಕಾನದ-ಕಟದರ ಮೂಲಕ್ಷೇತ್ರವಿರುವ ಮೂಡಬಿದಿರೆ ಸಮೀಪದ ಮಿಜಾರು ಗ್ರಾಮದ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ-ಕಟದ ಮೂಲಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆ ಆರಂಭಗೊಂಡಿದೆ. ದಿನಾಂಕ 08-02-2025ರಂದು ನೂತನ ಭವ್ಯ ದೈವಸ್ಥಾನಕ್ಕೆ ಶಿಲಾನ್ಯಾಸ ನಡೆದು ಮುಂದಿನ ಕೆಲವೇ ತಿಂಗಳುಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕ್ಷೇತ್ರದ ಹಿನ್ನೆಲೆ: ಶ್ರೀ ಸತ್ಯಸಾರಮಾನಿ ಕಾನದ-ಕಟದರು ಸತ್ಯಪದಿನಾಜಿ, ಸತ್ಯಪದ್ನಾಜಿ, ಸಾರಮುಪ್ಪಣೇರ್, ಮುಪ್ಪಣೇರ್, ಕಲಟ್ ಕಂಬೆರ್ಲು, ಸಾರಮಾನಿಲು ಎಂಬ ವಿವಿಧ ಹೆಸರುಗಳಿಂದ ತಲೆತಲಾಂತರದಿಂದ ಜನಮಾನಸದಲ್ಲಿ ಆರಾಧಿಸುತ್ತಿದ್ದಾರೆ. ಸುಮಾರು 500 ವರ್ಷಗಳ ಹಿಂದೆ, ಸಮಾಜದಲ್ಲಿ ಜಾತಿ ತಾರತಮ್ಯವಿದ್ದ ಕಾಲಘಟ್ಟದಲ್ಲಿ, ಮೂಡುಬಿದಿರೆಯ ಕೋಟೆಬಾಗಿಲಿನ ಇಟ್ಟೆಕೊಪ್ಪ ಪೆರಿಯಮಂಜದಲ್ಲಿ ಮಲ್ಲಸಂಕಡ ಎಂಬ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ ಬಂದು ಇಡೀ ಕೇರಿಯೇ ನಾಶವಾಗುತ್ತದೆ. ಆಗ ಅದೇ ಕೇರಿಯಲ್ಲಿದ್ದ ಪಾಂಬಲ ಅಜಿಗ, ಪೂಂಬಲ ಕರಿಯ ಎಂಬವರ ಸಹೋದರಿ ಬೊಮ್ಮಿ ಮಗುವೊಂದಕ್ಕೆ ಜನ್ಮ ನೀಡಿ ಇಹಲೋಕ ತ್ಯಜಿಸಿದಳು. ಸಹೋದರಿಯ 16 ದಿನಗಳ ಹಸುಗೂಸನ್ನು ಎತ್ತಿಕೊಂಡು ಪಾಂಬಲ ಅಜಿಗ, ಪೂಂಬಲ ಕರಿಯರು ಆಶ್ರಯ ಹುಡುಕಿಕೊಂಡು ಜೋಗೇರಕೊಪ್ಪಕ್ಕೆ ಬರುತ್ತಾರೆ. ಆದರೆ, ಅಲ್ಲಿ ಆಶ್ರಯ ಸಿಗದಿದ್ದಾಗ, ಕಿಜನೊಟ್ಟು ಅರಮನೆಗೆ ಬಂದು ಆಶ್ರಯ ಕೇಳುತ್ತಾರೆ. ಕಿಜನೊಟ್ಟು ಅರಸರಿಂದ ಆಶ್ರಯ ಪಡೆದ ಪಾಂಬಲ ಅಜಿಗ, ಪೂಂಬಲ ಕರಿಯರು ತಮ್ಮ ಸಹೋದರಿಯ ಮಗುವಿಗೆ ಬೊಲ್ಲೆ ಎಂದು ನಾಮಕರಣ ಮಾಡಿ, ಅರಸರ ಸಹಕಾರ, ಮಾರ್ಗದರ್ಶನದಿಂದ ಆಕೆಯನ್ನು ಸಾಕುತ್ತಾರೆ. ಅರಮನೆಯಿಂದ ಕೊಡಲಾದ ಹಾಲು-ಅನ್ನ ತಿಂದು ದೊಡ್ಡವಳಾದ ಬೊಲ್ಲೆ ತಾನಿದ್ದ ಕಿಜನೊಟ್ಟಿನ ಮೂಲದವರ ಕೇರಿಯಲ್ಲೇ ಎಲ್ಲರ ಅಚ್ಚುಮೆಚ್ಚಿನವಳಾಗುತ್ತಾಳೆ. ಅಪ್ರತಿಮ ಸುಂದರಿಯಾಗಿದ್ದ ಹೆಣ್ಣು ಮಗಳು ಬೊಲ್ಲೆಯನ್ನು ಆಕೆಗೆ ಹನ್ನೆರಡು ವರ್ಷಗಳಾಗುವಾಗ ಕಿಜನೊಟ್ಟು ಬಳಿ ಜಾನುವಾರು ವ್ಯಾಪಾರಕ್ಕೆ ಬಂದಿದ್ದ ಎತ್ತು, ಕೋಣ ವ್ಯಾಪಾರಿ ಎರುಕನಡನು ಭಸ್ಮಪ್ರಯೋಗ ಮಾಡಿ, ಸಮ್ಮೋಹನಗೊಳಿಸಿ ಆಕೆಯನ್ನು ಅಪಹರಣ ಮಾಡುತ್ತಾನೆ. ಭಸ್ಮಪ್ರಯೋಗಕ್ಕೆ ಒಳಗಾಗಿ ಗಾಢ ನಿದ್ದೆಯಲ್ಲಿದ್ದ ಬೊಲ್ಲೆ ಕಣ್ಣು ಬಿಡುವಾಗ ಎರುಕನಡನು ಆಕೆಯನ್ನು ಬಂಗಾಡಿ(ಬೆಳ್ತಂಗಡಿ ತಾಲೂಕು)ವರೆಗೆ ಕರೆದೊಯ್ದಾಗಿತ್ತು. ಬಂಗಾಡಿಯಲ್ಲಿ ಅಲ್ಲಿನ ಅರಸರ ಆದೇಶದಂತೆ ಯೋಧರು ಎರುಕನಡನನ್ನು ಬೆನ್ನಟ್ಟಿ ಕೊಂದು ಹಾಕುತ್ತಾರೆ. ಬೊಲ್ಲೆಯನ್ನು ಬಂಗಾಡಿ ಅರಸರು ರಕ್ಷಿಸುತ್ತಾರೆ. ನಂತರ ತನ್ನ ಒಕ್ಕಲಿನ ಕಪ್ಪದಮಾನಿ ಅಂದ್ರನನ್ನು ಬೊಲ್ಲೆಗೆ ವಿವಾಹ ಮಾಡಿಕೊಡಲಾಗುತ್ತದೆ. ಬೊಲ್ಲೆ ಅಲ್ಲಿ ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆ ಮಕ್ಕಳಿಗೆ ಕಾನದ-ಕಟದ ಎಂದು ನಾಮಕರಣ ಮಾಡಲಾಗುತ್ತದೆ. ಬೆಳೆದು ದೊಡ್ಡವರಾದ ಕಾನದ-ಕಟದರು ಬಂಗಾಡಿ ಅರಮನೆಗೆ ತೆರಳಿ, ಅರಸರ ಬಳಿ ತಮ್ಮ ತಾಯಿಗೆ ಮದುವೆಯ ಸಂದರ್ಭ ನೀಡಿದ್ದ ವಾಗ್ದಾನದಂತೆ ಭೂಮಿಯನ್ನು ನೀಡುವಂತೆ ಕೇಳಿಕೊಂಡರು. ಅಂದಿನ ಸಾಮಾಜಿಕ ಕಟ್ಟುಕಟ್ಟಳೆಗನುಗುಣವಾಗಿ ಕಾನದ-ಕಟದರ ಸಮುದಾಯದ ಜನರಿಗೆ ಭೂಮಿಯನ್ನು ನೀಡುವ ಅವಕಾಶವಿಲ್ಲವಾದರೂ, ಸತ್ಯದಪ್ಪೆ ಬೊಲ್ಲೆಗೆ ನೀಡಿದ್ದ ಮಾತಿಗೆ ಕಟ್ಟುಬಿದ್ದು ಬಂಗಾಡಿಯ ಬೆಟ್ಟದಲ್ಲಿ ಜಾಗವೊಂದನ್ನು ಅರಸರು ನೀಡಿದರು. ಅರಸರಿಂದ ಪಡೆದ ಕಡಿದಾದ ಬೆಟ್ಟವನ್ನು ರಾತ್ರಿ ಬೆಳಗಾಗುವುದರೊಳಗೆ ನೆಲಸಮ ಮಾಡಿದ ಕಾನದ-ಕಟದರು, ಕೃಷಿ ಮಾಡಲು ಕೋಣಗಳನ್ನು ಕೊಂಡುಕೊಳ್ಳಲು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಜಾನುವಾರು ಜಾತ್ರೆಗೆ ಹೋಗುವರು. ಅಲ್ಲಿ ಅಂದಿನ ಕಾಲದಲ್ಲಿದ್ದ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಕಾರಿ-ಕಬಿಲ ಎಂಬ ಕೋಣಗಳನ್ನು ಜೋಡಿ ಮಾಡಿದ ಕಾನದ-ಕಟದರು, ಕೋಣಗಳನ್ನು ಖರೀದಿಸಿ, ದಡ್ಡಾಲ್ಪಲ್ಕೆ ಎಂಬಲ್ಲಿ ಕಟ್ಟಿ ಹಾಕಿ, ಬಿತ್ತನೆಗೆ ಸತ್ಯದ ಬೆಳೆ ಎಂದು ಜನಪ್ರಿಯವಾಗಿದ್ದ ʼಅತಿಕಾರೆʼ ಭತ್ತದ ತಳಿಯ ಬೀಜವನ್ನು ತರಲೆಂದು ಬಿಸಿಲೆಘಾಟಿ ದಾಟಿ ಮೂಡಣ ದಿಕ್ಕಿಗೆ ಹೋದರು. ಮೂಡಣ ದಿಕ್ಕಿನ ರಾಜಮನೆತನವೊಂದರಿಂದ ʼಅತಿಕಾರೆʼ ತಳಿಯ ಭತ್ತದ ಬೀಜವನ್ನು ತರುವಾಗ ಬಿಸಿಲೆಘಾಟಿಯ ಗಡಿಯಲ್ಲಿರುವ ಚಾಮುಂಡಿ ದೇವತೆಯು ಕಾನದ-ಕಟದರಿಗೆ ಅಡ್ಡಬಂದು, ಸತ್ಯದ ಬೆಳೆಯಾದ ʼಅತಿಕಾರೆʼ ಬೀಜವನ್ನು ಘಟ್ಟದ ಮೇಲಿನಿಂದ ತುಳುನಾಡಿಗೆ ಕೊಂಡೊಯ್ಯಬಾರದು, ತಾನು ಬೆಳೆ ಕಾಯುವ ಶಕ್ತಿ ಎನ್ನುತ್ತಾಳೆ. ಆದರೆ ಕಾನದ-ಕಟದರು ತಾವು ಬೀಜವನ್ನು ಕೊಂಡೊಯ್ಯುವುದಾಗಿ ಛಲತೊಡುತ್ತಾರೆ. ಆಗ ಚಾಮುಂಡಿ ಹಾಗೂ ಆಕೆಯ ದೂತ ಗುಳಿಗನೊಂದಿಗೆ ಕಾನದ-ಕಟದರಿಗೆ ಹೋರಾಟ ನಡೆದು, ಕಾನದ-ಕಟದರೂ ದೈವೀಪುರುಷರೆಂದು ಅರಿತ ಚಾಮುಂಡಿಯು, ಅವರ ಸಾಹಸವನ್ನು ಮೆಚ್ಚಿ ಅವರಿಗೆ ಖಡ್ಗಗಳನ್ನು ಬಹುಮಾನವಾಗಿ ನೀಡಿ, ʼಅತಿಕಾರೆʼ ಭತ್ತದ ತಳಿಯನ್ನು ತುಳುನಾಡಿಗೆ ಕೊಂಡೊಯ್ಯಲು ಅನುಮತಿ ನೀಡುವಳು. ಹೀಗೆ ತಂದ ಅತಿಕಾರೆ ಬೀಜವನ್ನು ಕೃಷಿ ಮಾಡಿ ಬಂಗಾಡಿಯಲ್ಲಿ ಕಾನದ-ಕಟದರು ಜನಪ್ರಿಯರಾಗುತ್ತಾರೆ. ಹೀಗಿರುವಾಗ, ತಮ್ಮ ತಾಯಿಯ ಮಾವಂದಿರಾದ ಪಾಂಬಲ ಅಜಿಗ, ಪೂಂಬಲ ಕರಿಯರನ್ನು ಭೇಟಿ ಮಾಡಲೆಂದು ಕಾನದ-ಕಟದರು ತಮ್ಮ ತಾಯಿಯೊಂದಿಗೆ ಕಿಜನೊಟ್ಟಿಗೆ ಬರುತ್ತಾರೆ. ಆದರೆ ಕಿಜನೊಟ್ಟಿಗೆ ಬರುವಾಗ ಪಾಂಬಲ ಅಜಿಗ, ಪೂಂಬಲ ಕರಿಯರು ಈಗಾಗಲೇ ಮರಣ ಹೊಂದಿರುತ್ತಾರೆ. ಬೊಲ್ಲೆಯ ಅಪಹರಣದ ಬಳಿಕ ಕಿಜನೊಟ್ಟಿನ ಅಲೇರಿ ಪ್ರದೇಶದಲ್ಲಿ ದೈವಾರಾಧನೆ ನಿಂತಿದ್ದರಿಂದ, ಅಲ್ಲಿನ ಕೇರಿಯ ಜನರು ಸ್ಥಳಾಂತರಗೊಂಡು, ಆ ಪ್ರದೇಶ ಪಾಳುಬಿದ್ದಿತ್ತು. ಕಾನದ-ಕಟದರಿಗೆ ಕೃಷಿ ಮಾಡಲು ಈ ಪ್ರದೇಶವನ್ನು ಅರಸರು ನೀಡಿದರು. ಪಾಳುಬಿದ್ದಿದ್ದ ಭೂಮಿಯಲ್ಲಿ ಅಲೇರಿ ಕಟ್ಟವನ್ನು ನಿರ್ಮಿಸಿ, ಅದರ ಸುತ್ತಮುತ್ತಲ ಪ್ರದೇಶದಲ್ಲಿ ಕೃಷಿ ಮಾಡಲು ನೀರು ಹರಿಸಲು ಸುರಂಗಗಳನ್ನು ಕೊರೆದು, ಹೊಲಗಳಿಗೆ ಏತ ನೀರಾವರಿ ಮಾದರಿಯಲ್ಲಿ ನೀರೆತ್ತುವ ವ್ಯವಸ್ಥೆಯನ್ನು ಕಾನದ-ಕಟದರು ಮಾಡಿದರು. ʼಅತಿಕಾರೆʼ ಬೀಜವನ್ನು ಬಿತ್ತಿ ಕೃಷಿ ಮಾಡಿ, ಕಿಜನೊಟ್ಟಿನಲ್ಲೂ ಅವರು ಪ್ರಸಿದ್ಧರಾದರು.ಹೀಗಿರುವಾಗ, ಒಂದು ಕೆಡ್ಡಸದ ದಿನ ಮೃಗ ಬೇಟೆಯಾಡುವ ಉದ್ದೇಶದಿಂದ ಬಿಲ್ಲವರ ಅವಳಿ ವೀರರಾದ ಕೋಟಿ-ಚೆನ್ನಯರು, ಮುಗೇರರ ಕುಲದ ಕೇಲದ ಪೆರ್ನು, ಎಣ್ಮೂರ ದೆಯ್ಯುವಿನ ಜೊತೆಗೂಡಿ ಬೇಟೆಯಾಡಲು ತೊಡಗುತ್ತಾರೆ. ಬೇಟೆಯಾಡುತ್ತಾ ಮುಂದೆ ಸಾಗಿದ ವೀರರ ಜೋಡಿಗೆ ಕಾರ್ಕಳದ ಪಾಜೆಗುಡ್ಡೆ ಎಂಬಲ್ಲಿ ತಲುಪಿದಾಗ ಬಾಯಾರಿಕೆಯಾಗುತ್ತದೆ. ಆಗ ನಿಂತ ಜಾಗದಲ್ಲೇ ನೀರು ತೆಗೆಯಬೇಕೆಂದು ನಿರ್ಣಯಿಸಿ, ಕೋಟಿ-ಚೆನ್ನಯ್ಯರು ಮತ್ತು ಕೇಲದ ಪೆರ್ನು-ಎಣ್ಮೂರ ದೆಯ್ಯು ಮಾಡಿದ ಪ್ರಯತ್ನ ವಿಫಲವಾಯಿತು. ಕಾನದ-ಕಟದರು ತಮ್ಮಲ್ಲಿದ್ದ ಅಲಂಬುಡ (ಗೊಲ್ಮುರು) ಗಿಡದ ಕೋಲನ್ನು ಹಿಡಿದು, ತಾವು ನಂಬಿದ ಸತ್ಯದೈವಗಳು, ತಾಯಿ ಸತ್ಯದಪ್ಪೆ ಬೊಲ್ಲೆಯನ್ನು ನೆನೆದು ಬಂಡೆ ಸೀಳಿ ನೀರು ಚಿಮ್ಮಿಸಿ ಪವಾಡ ಮೆರೆಯುತ್ತಾರೆ. ಬೇಟೆ ಮುಗಿದ ಬಳಿಕ ಬೇಟೆಯ ಮಾಂಸ ಹಂಚಿಕೆಯ ವಿಚಾರದಲ್ಲಿ ತಮ್ಮ ಜೊತೆಗೆ ಬೇಟೆಗೆ ಬಂದಿದ್ದ ಕಾಲು, ಬೊಲ್ಲು, ಬಿಜಿಲು ನಾಯಿಗಳಿಗೆ ಮಾಂಸದ ಸರಿಯಾದ ಪಾಲು ದೊರೆಯ ಕಾರಣ, ಇನ್ನುಮುಂದೆ ನೀವು ಸತ್ತ ಪ್ರಾಣಿಗಳ ಮಾಂಸ ತಿನ್ನಬಾರದು, ಕಾಡಿನಲ್ಲಿ ಚೆನ್ನೆನಾಯಿಗಳಾಗಿ ಬೇಟೆಯಾಡಿ ಜೀವಂತ ಪ್ರಾಣಿಗಳ ಮಾಂಸ ತಿನ್ನಿರಿ ಎಂದು ಕಾನದ-ಕಟದರು ಆದೇಶಿಸುತ್ತಾರೆ. ಮೂಡುಬಿದಿರೆ ಮಾರಿಯಮ್ಮ ದೇವಸ್ಥಾನದ ಉತ್ಸವ ನಡೆಯುವಾಗ ಅಲ್ಲಿ ಮಾರಿಯಮ್ಮನ ದಂಡಿಗೆ (ಪಲ್ಲಕ್ಕಿ) ಮೇಲೇಳುವುದಿಲ್ಲ. ಆಗ ಕಾನದ ಎದುರಿನಿಂದ, ಕಟದ ಹಿಂದಿನಿಂದ ದಂಡಿಗೆಗೆ ಭುಜಕೊಟ್ಟು, ದಂಡಿಗೆ ಎತ್ತಿ ಉತ್ಸವ ಮುನ್ನಡೆಯುವಂತೆ ಮಾಡಿದ ಐತಿಹ್ಯವಿದೆ. ಹಿಂದೆ ತಮ್ಮ ಅಜ್ಜಂದಿರಾದ ಪಾಂಬಲ ಅಜಿಗ, ಪೂಂಬಲ ಕರಿಯರು ಹೇಳಿದ್ದ ಹರಕೆ ತೀರಿಸಲು ಬಾಕಿಯಿದೆ ಎಂದರಿತ ಕಾನದ-ಕಟದರು ಹರಕೆ ತೀರಿಸಲು ತೋಡ (ನದಿಯ) ಮೀನು ಅಗತ್ಯವಿದೆ ಎಂದರಿತು, ಮೀನಿಗಾಗಿ ಕಡು (ತುಳುನಾಡಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮೀನು ಹಿಡಿಯುವ ವಿಧಾನ) ಹಾಕಲು ನಿರ್ಧರಿಸುತ್ತಾರೆ. ಯಾವ ಗುಂಡಿಗಾದರೂ ಕಡು ಹಾಕಿ, ಅಲೇರಿ ಗುಂಡಿಗೆ ಕಡು ಹಾಕದಿರಿ ಎಂಬ ಹಿರಿಯರ ನುಡಿಗೆ ಕಿವಿಗೊಡದೆ, ಅದ್ಯಾಕೆ ಅಲೇರಿ ಗುಂಡಿಗೆ ಕಡು ಹಾಕಬಾರದು ಎಂದು ಪಟ್ಟುಹಿಡಿದು ಅದೇ ಗುಂಡಿಗೆ ಕಡು ಹಾಕುತ್ತಾರೆ. ಕಡು ಹಾಕಿ ಸುಮಾರು ಹೊತ್ತು ಮೀನು ಬೀಳದಿದ್ದಾಗ, ನಾಳೆ ಬೆಳಿಗ್ಗೆ ಬರೋಣವೆಂದು ಹೊರಟ ಕಾನದ-ಕಟದರಿಗೆ ಅರ್ಧಕ್ಕೆ ತೆರಳುವಾಗ ಕಾನದನು ತನ್ನ ಮುಟ್ಟಾಳೆ ಗುಂಡಿಯ ಬಳಿಯೇ ಬಿಟ್ಟುಬಂದುದು ನೆನಪಾಗಿ ಕಟದನು ಅದನ್ನು ತರಲೆಂದು ಹಿಂದಿರುಗುತ್ತಾನೆ. ಕಟದನು ಹಿಂದಿರುಗಿ ನೋಡುವಾಗ ಮೀನು ಹೊರಳಾಡುವುದನ್ನು ಗಮನಿಸಿ, ಕುತೂಹಲ ತಾಳಲಾರದೆ ಗುಂಡಿಗೆ ಇಳಿದೇ ಬಿಡುವನು. ಎಷ್ಟು ಹೊತ್ತಾದರೂ ಕಟದ ಬರದಿದ್ದುದನ್ನು ಕಂಡ ಕಾನದನು, ನೋಡಿ ಬರೋಣವೆಂದು ಗುಂಡಿಯ ಬಳಿ ನೋಡುವಾಗ ಮುಟ್ಟಾಲೆ ಅಲ್ಲೇ ಇದ್ದು, ಕಟದನು ಕಾಣಿಸುವುದಿಲ್ಲ. ಕಟದನು ಗುಂಡಿಗೆ ಇಳಿದಿರುವುದು ಗೊತ್ತಾಗುತ್ತದೆ. ಆದರೆ ಆತ ಮೇಲೆ ಬಂದಿಲ್ಲವೆಂಬುದನ್ನು ಅರಿತ ಕಾನದನೂ ಗುಂಡಿಗೆ ಇಳಿದನು. ಆದರೆ, ಗುಂಡಿಯಲ್ಲಿ ನೆಲೆಯಾಗಿದ್ದ ಅಲೇರಿ ಪಂಜುರ್ಲಿಯು ಕಾನದ-ಕಟದರಿಬ್ಬರನ್ನೂ ನೀರಿನಲ್ಲಿ ಮುಳುಗಿಸಿ ತನ್ನ ಅಧೀನಕ್ಕೆ ಪಡೆದುಕೊಂಡು ದೈವತ್ವವನ್ನು ನೀಡುವನು. “ಕಾಯಬಿಟ್ಟು ಮಾಯ ಸೇರಿದ” ಕಾನದ-ಕಟದರು ಅಂದಿನಿಂದ ಆದಿದ್ರಾವಿಡ-ಸಾರಮಾನಿ ಸಮುದಾಯದ ಕುಲದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ. ಇಂತಹ ಪರಮ-ಪವಿತ್ರ ಪೂಜ್ಯನೀಯ ಶ್ರೀ ಸತ್ಯಸಾರಮಾನಿ ಕಾನದ-ಕಟದರು ದೈವತ್ವವನ್ನು ಪಡೆದ ಮೂಲನೆಲೆಯಾದ ಅಲೇರಿ ಮೂಲಕ್ಷೇತ್ರದ ಜೀರ್ಣೋದ್ಧಾರಕ್ಕೆ ಇದೀಗ ಕಾಲ ಕೂಡಿಬಂದಿದೆ. ಆದಿದ್ರಾವಿಡ-ಸಾರಮಾನಿ ಸಮುದಾಯದ ಬಂಧುಗಳು, ಸಮಾಜದ ಗಣ್ಯರ ದೇಣಿಗೆಯ ರೂಪದಲ್ಲಿ ಬಂದಿರುವ ಮೊತ್ತದಲ್ಲಿ ಈಗಾಗಲೇ ಅಲೇರಿ ಮೂಲಕ್ಷೇತ್ರದ ಪ್ರದೇಶದ ಅತ್ಯಗತ್ಯ 1.13 ಎಕರೆ ಪ್ರದೇಶವನ್ನು ಖರೀದಿಸಿ, ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರ (ರಿ.) ಸಮಿತಿಗೆ ನೋಂದಾಯಿಸಲಾಗಿರುತ್ತದೆ. ಕಾನದ-ಕಟದರಿಗೆ ಸಂಬಂಧಿಸಿದ ಐತಿಹ್ಯಗಳು ಮತ್ತು ಮುಂದಿನ ದಿನಗಳಲ್ಲಿ ಜಾತ್ರೆ-ಉತ್ಸವಗಳನ್ನು ನಡೆಸಲು, ಕ್ಷೇತ್ರದ ಸಮಿತಿ ವತಿಯಿಂದ ಸಮಾಜಮುಖಿ ಸಂಸ್ಥೆಗಳು, ಚಟುವಟಿಕೆಗಳನ್ನು ನಡೆಸಲು ಒಟ್ಟು 5 ಎಕರೆ ಭೂಮಿ ಖರೀದಿಸಲು ಚಿಂತಿಸಲಾಗಿದೆ. ಈಗಾಗಲೇ 1.13 ಎಕರೆ ಭೂಮಿ ಖರೀದಿಸಲಾಗಿದ್ದರೂ, ಮುಂದಿನ ಉಳಿಕೆ ಜಾಗ ಖರೀದಿಗೆ ಮಾರ್ಚ್ ತಿಂಗಳು ಅಂತಿಮ ಗಡುವಿನ ಒಪ್ಪಂದ ನಡೆದಿರುತ್ತದೆ. ಹೀಗಾಗಿ, ಜರೂರಾಗಿ ಮೂಲಕ್ಷೇತ್ರಕ್ಕೆ ಸಂಬಂಧಿಸಿದ ಜಾಗ ಖರೀದಿ, ಮತ್ತು ಶ್ರೀ ಅಲೇರಿ ಪಂಜುರ್ಲಿ ದೈವದ ಭವ್ಯ ದೈವಸ್ಥಾನ, ಕಾನದ-ಕಟದರು, ಸತ್ಯದಪ್ಪೆ ಬೊಲ್ಲೆಯ ತರವಾಡು ಮನೆ, ಕಾನದ-ಕಟದರು, ಸತ್ಯದಪ್ಪೆ ಬೊಲ್ಲೆಯ ಬಿಂಬವುಳ್ಳ ಭವ್ಯ ಪ್ರತಿಮೆಗಳು, ದೈವ ಗುಳಿಗ ಸಾನಿಧ್ಯ, ಅಲೇರಿ ನಾಗಬೆಮ್ಮೆರ ನಾಗಬನ ಅಭಿವೃದ್ಧಿ ಮುಂತಾದ ಜೀರ್ಣೋದ್ಧಾರ ಚಟುವಟಿಕೆಗಳು ಬಿರುಸಿನಿಂದ ನಡೆಯಲಿವೆ. ಈ ಎಲ್ಲಾ ಜೀರ್ಣೋದ್ಧಾರದ ಪುಣ್ಯಕಾರ್ಯದಲ್ಲಿ ಕೈ ಜೋಡಿಸುವಂತೆ ಸಮುದಾಯದ ಸದಸ್ಯರು, ಗಣ್ಯರು, ಕೊಡುಗೈ ದಾನಿಗಳು, ಊರ-ಪರವೂರ ಸರ್ವ ಸಮಾಜದ ಬಂಧುಗಳು ತನು-ಮನ-ಧನದೊಂದಿಗೆ ಕೈ ಜೋಡಿಸಬೇಕೆಂದು ವಿನಂತಿ.


