ದೇರಳಕಟ್ಟೆ: ಒಬ್ಬರ ಜೀವ ಉಳಿಸುವುದು, ನೊಂದವರ ಕಣ್ಣೀರು ಒರೆಸುವುದು, ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಪುಣ್ಯದಾಯಕ ಕಾರ್ಯ. ಇದನ್ನು ಎಸ್ಕೆಎಸ್ಸೆಸ್ಸೆಫ್ ವಿವಿಧ ಶಾಖೆಗಳ ಮೂಲಕ ನಿರಂತರ ಮಾಡುತ್ತಾ ಬಂದಿದೆ. ಸಮಸ್ತ ನೂರನೇ ವರ್ಷಾಚರಣೆ ಪ್ರಯುಕ್ತ ರಕ್ತದಾನ ಸಹಿತ ವಿವಿಧ ಸಾಮಾಜಿಕ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಆನೆಕಲ್ ಮಸೀದಿಯ ಖತೀಬ್ ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಅಲ್ ಬುಖಾರಿ ಅಭಿಪ್ರಾಯಪಟ್ಟರು.
ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖೆ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ.ಜಿಲ್ಲಾ ಪಶ್ಚಿಮ ರಕ್ತದಾನಿ ಬಳಗ ಹಾಗೂ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಸಮಸ್ತ ನೂರನೇ ವಾರ್ಷಿಕ ಪ್ರಚಾರ ಹಾಗೂ ದಿವಂಗತ ಅಬ್ದುಲ್ ರಹಿಮಾನ್ ಕೊಳತ್ತಮಜಲು ಸ್ಮರಣಾರ್ಥಇನೋಳಿ ಕಂಬಳ ಪದವು ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ಯಾವುದೇ ವಸ್ತು ಹಣ ಕೊಟ್ಟರೆ ಸಿಗುತ್ತದೆ, ಆದರೆ ರಕ್ತವನ್ನು ಹಣಕೊಟ್ಟು ಪಡೆಯುವುದಾಗಲೀ, ಕೃತವಾಗಿ ಸೃಷ್ಟಿಸುವುದಾಗಲೀ ಅಸಾಧ್ಯ, ರಕ್ತದಾನದಿಂದ ಇನ್ನೊಬ್ಬರಿಗೆ ಜೀವನ ನೀಡಿದ ಪುಣ್ಯವೂ ಸಿಗುತ್ತದೆ ಎಂದು ತಿಳಿಸಿದರು. ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಅಧ್ಯಕ್ಷ ಟಿ.ಎಚ್.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು.
ಪಜೀರ್ ಮೆರ್ಸಿಯಮ್ಮನವರ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಲೇರಿಯನ್ ಡಿಸೋಜ, ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಇನೋಳಿ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಚಕ್ಕರ್, ಎಸ್ಕೆಎಸ್ಸೆಸ್ಸೆಫ್ ಇನೋಳಿ ವಲಯಾಧ್ಯಕ್ಷ ಜಾಫರ್ ಇನೋಳಿ, ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಎಚ್.ಕಲ್ಲ್, ಇನೋಳಿ ಬಿಸೈಟ್ ಮಸೀದಿಯ ಉಪಾಧ್ಯಕ್ಷ ಹುಸೈನ್ ಬಾವು ಮೊದಲಾದವರು ಉಪಸ್ಥಿತರಿದ್ದರು. ಪಾವೂರು ಗ್ರಾ.ಪಂ. ಸದಸ್ಯ ಮುಹಮ್ಮದ್ ಅನ್ಸಾರ್ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಪ್ರ.ಕಾ.ಇಕ್ಬಾಲ್ ಕಾನ ಕಾರ್ಯಕ್ರಮ ನಿರೂಪಿಸಿದರು.


