ಬಂಟ್ವಾಳ: ತಾಲ್ಲೂಕಿನ ಸಜಿಪ ಮೂಡ ಗ್ರಾಮದ 2025–26 ಸಾಲಿನ ಗ್ರಾಮ ಸಭೆ ದಿನಾಂಕ 10.12.2025 (ಬುಧವಾರ) ರಂದು ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ ಅವರ ನೇತೃತ್ವದಲ್ಲಿ ಸಜಿಪ ಮೂಡ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿಗಳ ವಿರುದ್ಧ ಭ್ರಷ್ಟಾಚಾರ ಹಾಗೂ ಅಕ್ರಮ ಕೆಲಸಗಳ ಬಗ್ಗೆ ಗಂಭೀರ ಆರೋಪಗಳನ್ನು ಹೊರಹಾಕಿದರು.

ಚರ್ಚಾ ಕೂಟದಲ್ಲಿ ಸಮೀರ್ ಕಾರಜೆ ರವರ ಪ್ರಶ್ನೆಯ ಹಿನ್ನೆಲೆಯಲ್ಲಿ, ಲಾವಣ್ಯ ರವರು ಸಾರ್ವಜನಿಕರಿಂದ ಸಂಗ್ರಹವಾಗುವ ನೀರಿನ ಪಾವತಿಯ ಧನದ ದುರುಪಯೋಗ ಕುರಿತು ಸ್ಪಷ್ಟಪಡಿಸಿದರು. ಆದರೆ ಈ ಆರೋಪಗಳ ಬಗ್ಗೆ ವಿವರ ಕೇಳಿದಾಗ ಸಂಬಂಧಿಸಿದ ಅಧಿಕಾರಿಗಳು ಮತ್ತು ಪಿಡಿಒ ಉತ್ತರಿಸಲು ನಿರಾಕರಿಸಿದರು.

ಈ ಕ್ರಮಕ್ಕೆ ವಿರೋಧವಾಗಿ ಮಲಿಕ್ ಕೊಳಕೆ, ಬಸೀರ್ ಬೊಳ್ಳಾಯಿ ಸೇರಿದಂತೆ ಗ್ರಾಮಸ್ಥರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರ ಒತ್ತಾಯ, ಪ್ರಶ್ನೆಗಳು ಹಾಗೂ ದಾಖಲೆಗಳ ಮುಂದೆ, ನಂತರದ ಹಂತದಲ್ಲಿ ಪಿಡಿಒ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಪಟ್ಟುಬಿಟ್ಟದೇ, ಆರೋಪಿತರಾದ ಸಿಬ್ಬಂದಿಯನ್ನು ತಕ್ಷಣ ವಜಾ ಮಾಡಬೇಕು, ಅಕ್ರಮದಲ್ಲಿ ಭಾಗಿಯಾದವರನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೊನೆಗೆ, ಚರ್ಚೆಯ ನಂತರ ಸಿಬ್ಬಂದಿಯನ್ನು ವಜಾ ಮಾಡುವ ನಿರ್ಣಯವನ್ನು ಗ್ರಾಮ ಸಭೆಯಲ್ಲಿ ಏಕಮತದಿಂದ ಅಂಗೀಕರಿಸಲಾಯಿತು.


