ವಿಟ್ಲ: ಗೋಹತ್ಯೆ ತಡೆ ಕಾನೂನಿನ ಜಾಗೃತಿ ಕಾರ್ಯಕ್ರಮಕ್ಕಾಗಿ ಮಸೀದಿಯನ್ನು ಆಯ್ಕೆ ಮಾಡಿದ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತ ಮುಖಂಡ ಎಂ.ಎಸ್. ಮಹಮ್ಮದ್ ಅವರ ನೇತೃತ್ವದಲ್ಲಿ ನಿಯೋಗವೊಂದು ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ನಿಯೋಗದವರು ಪೊಲೀಸರೊಂದಿಗೆ ಸವಿವರವಾಗಿ ಚರ್ಚಿಸಿ, “ಕಾನೂನು ಬಾಹಿರ ಅಥವಾ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಯಾರ ಮೇಲಾದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ, ಆದರೆ ಒಂದು ಸಮುದಾಯವನ್ನು ಗುರಿಯಾಗಿಸಿ ಮಸೀದಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.“ಗೋಹತ್ಯೆ, ಮಾದಕ ವ್ಯಸನ, ಇತ್ಯಾದಿ ಕುರಿತು ಸಾರ್ವಜನಿಕ ಮಟ್ಟದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಒಂದು ಸಮುದಾಯವನ್ನು ಗುರಿಯಾಗಿಸುವ ರೀತಿಯ ಕ್ರಮ ನ್ಯಾಯೋಚಿತವಲ್ಲ. ನಮ್ಮ ಉಲಮಾ ನೇತಾರರು ಪ್ರತಿ ಶುಕ್ರವಾರವೇ ಈ ಕುರಿತು ಸಮುದಾಯದೊಳಗೆ ಜಾಗೃತಿ ಮೂಡಿಸುತ್ತಿದ್ದಾರೆ,” ಎಂದು ನಿಯೋಗವು ತಿಳಿಸಿತು.

ಈ ಕುರಿತು ಪ್ರತಿಕ್ರಿಯಿಸಿದ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು, “ವಿಟ್ಲ ಠಾಣಾ ವ್ಯಾಪ್ತಿಯ ಮಸೀದಿಗಳಲ್ಲಿ ಪೊಲೀಸರು ಬೇಟಿ ನೀಡುವುದಿಲ್ಲ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಕರೀಂ ಕುದ್ದುಪದವು, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶಮೀರ್ ಪಳಿಕೆ,ವಿಟ್ಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕೆಎಂ ಹಂಝ, ಕಾಂಗ್ರೆಸ್ ಮುಖಂಡ ರಶೀದ್ ವಿಟ್ಲ, ಸಿರಾಜ್ ಮಣಿಲ, ಕನ್ಯಾನ ಗ್ರಾ.ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ಕನ್ಯಾನ, ಪುತ್ತೂರು ಗ್ಯಾರಂಟಿ ಯೋಜನೆಯ ಸದಸ್ಯ ಅಬ್ಬು ಹುಸೈನ್ ನವಗ್ರಾಮ, ಸಾಮಾಜಿಕ ಮುಖಂಡ ಹಸೈನಾರ್ ತಾಳಿತ್ತನೂಜಿ, ಅಶ್ರಫ್ ಮಣಿಲ, ರಹೀಂ ಪಳಿಕೆ ಹಾಗೂ ಗ್ರಾ.ಪಂಚಾಯತ್ ಮಾಜಿ ಸದಸ್ಯ ಶೇಕ್ ಅಲಿ ಸೇರಾಜೆ ಉಪಸ್ಥಿತರಿದ್ದರು.


