ಡಾ.ಕಿಶೋರ್ ಕ್ರೀಡಾಕ್ಷೇತ್ರದ ಸಾಧಕ, ಸಮರ್ಥ ನಾಯಕ: ಪ್ರೊ.ಧರ್ಮ

- ಕೊಣಾಜೆ: ಕ್ರೀಡೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಮರ್ಥ ನಾಯಕತ್ವ ಒದಗಿಸಿದ ಕೀರ್ತಿ ಡಾ.ಕಿಶೋರ್ ಕುಮಾರ್ ಅವರಿಗೆ ಸಲ್ಲುತ್ತದೆ. ಬದುಕಿನಲ್ಲಿ ಪ್ರಯತ್ನ ಪಟ್ಟರೆ ಏನನ್ನೂ ಸಾಧಿಸಬಹುದು ಎಂಬುದನ್ನು ದೃಢವಾಗಿ ನಂಬಿದ್ದ ಅವರು ಬದುಕಿನಲ್ಲಿ ಶಿಸ್ತು ಬದ್ಧ ಕಾರ್ಯನಿರ್ವಹಣೆಯ ಮೂಲಕ ಮಂಗಳೂರು ವಿವಿಗೆ ಗೌರವ ತಂದುಕೊಟ್ಟಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ. ಎಲ್. ಧರ್ಮ ಹೇಳಿದರು.
- ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಕಿಶೋರ್ ಕುಮಾರ್ ಸಿ.ಕೆ ಇವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಕುಲಸಚಿವರಾದ ಕೆ.ರಾಜು ಮೊಗವೀರ ಇವರು ಸಂತಾಪ ಸೂಚಿಸಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಡೀನ್ ಮತ್ತು ಪ್ರಭಾರ ಕುಲಸಚಿವರಾಗಿ ಪ್ರಭಾರ ಕುಲಪತಿಗಳಾಗಿ ಡಾ.ಕಿಶೋರ್ ಕುಮಾರ್ ಅವರು ಮಾಡಿದ ಸೇವೆಯನ್ನು ಸ್ಮರಿಸಿದರು.
ಕರ್ನಾಟಕ ವಿವಿ ಕುಲಪತಿ ಪ್ರೊ.ಎ.ಎಂ ಖಾನ್, ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ದೈಹಿಕ ಶಿಕ್ಷಣ ನಿಕಾಯದ ಡೀನ್ ಡಾ.ಜೆರಾಲ್ಡ್ ಸಂತೋಷ್, ಸಾಮಾಜಿಕ ಮುಖಂಡ ಪ್ರಸಾದ್ ರೈ ಕಳ್ಳಿಮಾರ್, ವಿವಿ ಶಿಕ್ಷಕೇತರ ಸಂಘದ ಅಧ್ಯಕ್ಷ ವಿಜಯರಾಜ್, ಕಾರ್ಯದರ್ಶಿ ಚಂದ್ರಶೇಖರ ಎಂ.ಬಿ, ಸಿಬ್ಬಂದಿ ಚನಿಯಪ್ಪ, ಇಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ನಿರ್ದೇಶಕರಾದ ಪ್ರೊ.ಪ್ರಶಾಂತ ನಾಯ್ಕ್ ಇವರು ಕಿಶೋರ್ ಕುಮಾರ್ ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.


