ಕೊಣಾಜೆ: ಶಿಕ್ಷಣದಿಂದ ಜ್ಞಾನದ ವಿತರಣೆಯಾಗಬೇಕು. ಪರಂಪರೆಯಿಂದಲೇ ತುಳುವಿನಲ್ಲಿ ಜ್ಞಾನವನ್ನು ಹಂಚುವ ಕೆಲಸ ಮೌಖಿಕವಾಗಿ ಆಗಿದೆ. ತುಳುವಿನಲ್ಲಿಯೂ ಶೈಕ್ಷಣಿಕ ನೆಲೆಗಟ್ಟಿನ ಮೂಲಕ ಲೋಕಜ್ಞಾನ ದೊರಕುವಂತಾದರೆ ತುಳು ಭಾಷೆಗೂ ಮಾನ್ಯತೆಯೂ ದೊರೆಯುತ್ತದೆ. ತುಳು ಭಾಷೆಯನ್ನು ಉಳಿಸಿ ಬೆಳೆಸುವ ಜವಬ್ಧಾರಿ ತುಳುವರದ್ದೇ ಆಗಿದೆ ಎಂದು ಹಾವೇರಿ ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಹೇಳಿದರು.

ಅವರು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ವಿವೇಕ್ ರೈ ವಿಚಾರ ವೇದಿಕೆಯಲ್ಲಿ ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ವತಿಯಿಂದ ಕಪ್ಪಂದಕರ್ಯ ಕುಪ್ಪಣ್ಣ-ತುಂಬೆಕ್ಕ ಪ್ರತಿಷ್ಠಾನ ಮೂಡುಬೆಳ್ಳೆಯ ದತ್ತಿ ನಿಧಿಯ ಸಲುವಾಗಿ, ‘ ಶಿಕ್ಷಣೊಡು ತುಳು: ಕೊಡೆ-ಇನಿ-ಎಲ್ಲೆ’ ಎಂಬ ಉಪನ್ಯಾಸ ಮತ್ತು ತುಳು ಎಂ.ಎ. ಯಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಲ್. ಧರ್ಮ ಅವರು ವಹಿಸಿ ಮಾತನಾಡಿ, ತುಳುವಿನ ಸಾಂಸ್ಕೃತಿಕ ನೆಲೆಗಟ್ಟು ಅತ್ಯಂತ ಶ್ರೀಮಂತವಾದುದು. ತುಳು ಭಾಷೆಗೆ ಇತಿ ಮಿತಿಯನ್ನು ಹೇರದೆ ವಿಸ್ತಾರವಾಗಿ ಬೆಳೆಸಬೇಕಾದ ಅಗತ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಆಶಯಗಳು ಬದಲಾಗುತ್ತಾ ಇರುತ್ತವೆ. ತುಳುವಿಗೆ ಬಹಳ ವಿಶೇಷವಾಗಿ ಶೈಕ್ಷಣಿಕವಾದ ಚೌಕಟ್ಟನ್ನು ರೂಪಿಸಲು ಮಂಗಳೂರು ವಿವಿ ಮುಂದಾಗಿದೆ. ತುಳು ಶಿಕ್ಷಣ, ಚಟುವಟಿಕೆಗಳಿಗೆ ಅಭಿಮಾನದಿಂದ ಪ್ರೋತ್ಸಾಹಿಸೋಣ ಎಂದರು.
‘ ಶಿಕ್ಷಣೊಡು ತುಳು: ಕೋಡೆ-ಇನಿ-ಎಲ್ಲೆ’ ಎಂಬ ವಿಷಯದ ಬಗೆಯಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತಿ ಶೆಟ್ಟಿ ಇರುವೈಲು ಉಪನ್ಯಾಸವನ್ನು ನೀಡಿ ತುಳುನಾಡಿನ ಅನೇಕ ವಿದ್ವಾಂಸರು ತುಳುನಾಡು ,ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಕುರಿತಾಗಿ ನಡೆಸಿದ ಸಂಶೋಧನೆ, ಅಧ್ಯಯನಗಳಿಂದ ತುಳುವಿನ ಅನೇಕ ವಿಷಯಗಳು ಸಂಗ್ರಹವಾಗುವ ಮೂಲಕ ಇಂದು ಎತ್ತರದ ಸ್ಥಾನವನ್ನು ಪಡೆದುಕೊಂಡಿದೆ. ಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿಗೂ ಮಾನ್ಯತೆ ದೊರೆಯದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕಪ್ಪಂದಕರ್ಯ ಕುಪ್ಪಣ್ಣ-ತುಂಬೆಕ್ಕ ಪ್ರತಿಷ್ಠಾನ ಮೂಡುಬೆಳ್ಳೆಯ ಸಂಚಾಲಕರಾದ ಮುದ್ದು ಮೂಡುಬೆಳ್ಳೆ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸುಬ್ಬ ಪಕ್ಕಳ, ಸಹ ಪ್ರಾಧ್ಯಾಪಕ ಡಾ.ಮಾಧವ ಎಂ.ಕೆ, ಜಿಲ್ಲಾ ಕಸಾಪ ಸಂಘಟನ ಕಾರ್ಯದರ್ಶಿ ಲ.ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಪ್ರಾಧ್ಯಾಪಕರಾದ ಪ್ರೊ.ಪರಿಣಿತ, ಎಡ್ವರ್ಡ್ ಲೋಬೋ, ಡಾ. ಸಬಿತಾ, ಆನಂದ ಮಾಸ್ಟರ್ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತುಳು ಎಂ ಎ ಯಲ್ಲಿ ರ್ಯಾಂಕ್ ವಿಜೇತರಾದ ಮಂಜುಳಾ ಶೆಟ್ಟಿ ಹಾಗೂ ಜ್ಯೋತಿ ಪ್ರಿಯಾ ಅವರನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತುಳು ಪೀಠದ ಸಿಬ್ಬಂದಿ ಪ್ರಸಾದ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಅಮ್ಮೆಂಬಳ ವಂದಿಸಿದರು.
ಎಂ.ಎಗೆ ಸೆಮಿಸ್ಟರ್ ಪದ್ಧತಿ ಮಂಗಳೂರು ವಿಶ್ವವಿದ್ಯಾನಿಲಯವು ಶೈಕ್ಷಣಿಕವಾಗಿ ತುಳುವನ್ನು ಕಟ್ಟುವ ಕಾರ್ಯ ನಿರಂತರ ಮಾಡುತ್ತದೆ. ತುಳು ಎಂ.ಎ ಯ ಪಠ್ಯಕ್ರಮವನ್ನು ಸೆಮಿಸ್ಟರ್ ಪದ್ಧತಿಗೆ ಅಳವಡಿಸಿ ಮುಂದುವರಿಸಲಾಗುವುದು- ಪ್ರೊ.ಪಿ.ಎಲ್ ಧರ್ಮಕುಲಪತಿಗಳು


