ಮೂಡಬಿದಿರೆ: ತನಗೆ ಹೋಗಬೇಕಾದ ಸ್ಥಳವನ್ನು ಗೂಗಲ್ ಮ್ಯಾಪ್ ಹಾಕಿ ಸರಕು ತುಂಬಿಸಿಕೊಂಡು ಹೋದ ಲಾರಿಯೊಂದು ಬೇರೆ ಊರಿಗೆ ಹೋಗಿದ್ದಲ್ಲದೆ ಚಾಲಕನ ನಿಯಂತ್ರಣ ತಪ್ಪಿರಾಂಗ್ ಸೈಡ್ ಗೆ ಬಂದು ಗುಡ್ಡದ ಬುಡದ ಗೋಡೆಗೆ ಡಿಕ್ಕಿ ಹೊಡೆದು ನಿಂತ ಘಟನೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಬುಧವಾರ ಮುಂಜಾನೆ ನಡೆದಿದೆ.

ರಾತ್ರಿ ಎರಡು ಗಂಟೆ ವೇಳೆ ಕಡಂದಲೆ ಇಳಿಜಾರು ಪ್ರದೇಶದ ತಿರುವಿನಲ್ಲಿ ಲಾರಿ ಸಂಚರಿಸುತ್ತಿದ್ದ ವೇಳೆ, ಚಾಲಕನಿಗೆ ಹೊಸ ರಸ್ತೆಯಾಗಿರುವುದರಿಂದ ಗೊಂದಲವಾಗಿ ನಿಯಂತ್ರಣ ಕಳೆದುಕೊಂಡು ಇನ್ನೊಂದು ಬದಿಯ ಗೋಡೆಗೆ ಡಿಕ್ಕಿಯಾಗಿದೆ. ಈ ಕುರಿತು ಚಾಲಕ ಮಾಹಿತಿ ನೀಡಿದ್ದು, ನಾನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಪೇಪರ್ ಮಿಲ್ ಗೆ ಹೋಗಬೇಕಿದ್ದು, ಗೂಗಲ್ ಮ್ಯಾಪ್ ಅನುಸರಿಸಿ, ಇಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಲಾರಿ ಗುಡ್ಡದ ಬದಿಗೆ ಢಿಕ್ಕಿ ಹೊಡೆದು ನಿಂತಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.




