
ಉಳ್ಳಾಲ: ಹೋಬಳಿಯ ಕೆಲವು ಸಮಸ್ಯೆಗಳಿಂದ ಪಂದ್ಯಾಟ ಅಯೋಜಿಸಲು ಯಾರೂ ಮುಂದೆ ಬಾರದ ಸಂದರ್ಭದಲ್ಲಿ ಮರ್ಕಝುಲ್ ಹಿದಾಯ ಶಾಲೆ ಒಪ್ಪಿಕೊಂಡು ಪಂದ್ಯಾಟ ಅಯೋಜಿಸಿದೆ ಎಂದು ಮಂಗಳೂರು ದಕ್ಷಿಣ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್ ಶ್ಲಾಘಿಸಿದರು.
ದ.ಕ.ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕೋಟೆಕಾರ್ ಅಜ್ಜಿನಡ್ಕ ಮರ್ಕಝುಲ್ ಹಿದಾಯ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮರ್ಕಝುಲ್ ಹಿದಾಯ ಶಾಲಾ ಕ್ರೀಡಾಂಗಣದಲ್ಲಿ ನಡೆದ ಉಳ್ಳಾಲ ಹೋಬಳಿ ಮಟ್ಟದ 14 ಮತ್ತು 17 ವಯೋಮಾನದ ಬಾಲಕ-ಬಾಲಕಿಯರ ಖೋಖೋ ಹಾಗೂ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಲೋಚನೆ ಮತ್ತು ಉದ್ದೇಶ ಉತ್ತಮವಾಗಿದ್ದರೆ ದೇವರು ಸಹಾಯ ಸಹಕಾರ ಇರುತ್ತದೆ, ಕ್ರೀಡಾಕೂಟಕ್ಕೆ ಉತ್ತಮ ವಾತಾರಣ ಇರುವುದು ಇದಕ್ಕೆ ಸಾಕ್ಷಿ, ಈ ಮೂಲಕ ದೇವರ ಸಹಾಯ ಲಭಿಸಿದೆ ಎಂದು ತಿಳಿಸಿದರು.
ಮರ್ಕಝುಲ್ ಹಿದಾಯ ಶಾಲೆಯ ಅಧ್ಯಕ್ಷ ಕೆ.ಎಂ. ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎಂ.ರಹೀಮ್, ಕಾರ್ಯದರ್ಶಿ ಯು.ಎಚ್.ಫಾರೂಕ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಜಯವಂತಿ ಸೋನ್ಸ್, ಉಳ್ಳಾಲ ಹೋಬಳಿ ನೋಡೆಲ್ ಶಿಕ್ಷಕ ರಾಜೀವ ನಾಯಕ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹಮೀದ್, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಾಕೃಷ್ಣ ರೈ, ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಎನ್.ಎಸ್.ಉಮರಬ್ಬ ಸ್ವಾಗತಿಸಿದರು. ಶಾಲೆಯ ಮುಖ್ಯಶಿಕ್ಷಕಿ ಮುಮ್ತಾಝ್ ಶೇಖ್ ವಂದಿಸಿದರು.
ಶಿಕ್ಷಕ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.