ಕೊಪ್ಪಳ: ಅ.30. ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ) ಕೊಪ್ಪಳ ವತಿಯಿಂದ ಅಕ್ಟೋಬರ್ 26ರಂದು ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕೊಪ್ಪಳದ ಸಾಂಸ್ಕೃತಿಕ ಭವನದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞರಾದ ಲೇಖಕ ಅರವಿಂದ ಚೊಕ್ಕಾಡಿ , ಮಾಜಿ ಶಾಸಕ ಚಿಂತಕರಾದ ವೈ.ಎಸ್.ವಿ.ದತ್ತ ಅವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡಿದ್ದು ಗಣ್ಯರ ಉಪಸ್ಥಿತಿಯಲ್ಲಿ ಮುಂಬಯಿಯ ಕವಿ ಅನಿತಾ ಪಿ.ತಾಕೊಡೆಯವರಿಗೆ 2025ನೆಯ ಸಾಲಿನ ಗವಿಸಿದ್ಧ ಎನ್.ಬಳ್ಳಾರಿ ಕಾವ್ಯಪ್ರಶಸ್ತಿ ಪ್ರದಾನಿಸಲಾಯಿತು.

ಇದೇ ಸಮಯ ವೈ ಎಸ್.ವಿ.ದತ್ತ ಅವರು ಅನಿತಾ ಅವರ ಪ್ರಶಸ್ತಿ ವಿಜೇತ ಕೃತಿ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದರು. ಅವರು ಕೃತಿ ಬಿಡುಗಡೆಯ ನಂತರ ಮಾತನಾಡುತ್ತಾ ಗವಿಸಿದ್ದ ಎನ್.ಬಳ್ಳಾರಿಯವರ ಕಾಲದಲ್ಲಿಯೇ ಸಮಾಜವಾದದ ಚಿಂತನೆ ಮೂಲಕ ರಾಜಕೀಯ ಪ್ರವೇಶ ಮಾಡಿರುವ ತಾನು, ‘ಕವಿ ಗವಿಸಿದ್ದ ಅವರು ಬದುಕಿರುವ ತನಕವೂ ಸಾಮಾಜಿಕ ಹೋರಾಟ, ಜನಪರ ನಿಲುವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ನೆನಪಿಸಿದರು. ತುರ್ತು ಪರಿಸ್ಥಿತಿಯ ದಿನಗಳಲ್ಲಿಯೂ ಗವಿಸಿದ್ದ ಅವರು ಹೋರಾಟದಲ್ಲಿ ತೊಡಗಿಸಿಕೊಂಡ ರೀತಿ ಗಮನಾರ್ಹ. ಇಂದು ಅವರ ನೆನಪಿನಲ್ಲಿ ಕವಿಯಿತ್ರಿಯರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯವಾಗಿದೆ’ ಎಂದು ನುಡಿದರು.ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿಯವರು, ‘ಗವಿಸಿದ್ದ.ಎನ್.ಬಳ್ಳಾರಿ ಕವಿ, ಪತ್ರಕರ್ತರಾಗಿ ಜನಾನುರಾಗಿಯಾಗಿ ಕೆಲಸ ಮಾಡಿದವರು. ಸಾಹಿತ್ಯ ಪ್ರಜ್ಞೆ ಜನರ ಸಾಮಾನ್ಯ ಪ್ರಜ್ಞೆಯಾಗಬೇಕು. ಇಂಥ ಪ್ರಜ್ಞೆ ದೈನಂದಿನ ಬದುಕಿನ ವರ್ತನೆಯಲ್ಲಿ ಪರಿವರ್ತನೆ ತಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎನ್ನುತ್ತಾ ಅಂದು ಬಿಡುಗಡೆಗೊಂಡ ಮೇಣಕ್ಕಂಟಿದ ಬತ್ತಿ ಕವನ ಸಂಕಲನವನ್ನುದ್ದೇಶಿಸಿ, ಅನಿತಾ ತಾಕೊಡೆಯವರ ಕವನಗಳು ನವ್ಯ ಮಾದರಿಯಾದರೂ ನವ್ಯದ ತೀವ್ರ ಹತಾಶೆ ಏಕಾಕಿತನವಿಲ್ಲದ ನವ್ಯವನ್ನು ನವೋದಯದ ಮಾದರಿಯಲ್ಲಿ ಸುಂದರಗೊಳಿಸಿದ ವಿನ್ಯಾಸದ ಕವಿತೆಗಳಂತಿವೆ. ಕಾವ್ಯದಲ್ಲಿ ಹಲವು ಅರ್ಥಗಳನ್ನು ಏಕಕಾಲದಲ್ಲಿ ಹೊಳೆಯಿಸುವಷ್ಟು ಸಶಕ್ತವಾಗಿ ಪದಬಳಕೆಯನ್ನು ಮಾಡಿದ್ದಾರೆ’ ಎಂದು ನುಡಿದರು.

ಸಂಸ್ಥೆಯ ಸಂಚಾಲಕರಾದ ಮಹೇಶ ಬಳ್ಳಾರಿ ಅವರು, ‘ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ವತಿಯಿಂದ ಪ್ರತಿವರ್ಷವೂ ಸಾಹಿತ್ಯೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಸಾಧ್ಯವಾದಷ್ಟು ಸಾಹಿತ್ಯ ಸೇವೆ ಮಾಡುತ್ತಿದ್ದೇವೆ’ ಎಂದರು.ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಅನಿತಾ ತಾಕೊಡೆಯವರು ತಮ್ಮಮಾತುಗಳಲ್ಲಿ, “ಗವಿಸಿದ್ದ ಬಳ್ಳಾರಿ ಅವರು ಕವಿತೆಗಳ ಮೂಲಕ ನೆಲದ ನೋವಿಗೆ ದನಿಯಾದವರು. ಅವರು ಮಾಡಿದ ಸಾಮಾಜಿಕ ಸಾಹಿತ್ಯಕ ಕಾರ್ಯದಿಂದಲೇ ಜನಮಾನಸರ ಮನಸ್ಸಿನಲ್ಲಿ ಚಿರವಾಗಿ ಉಳಿದಿದ್ದಾರೆ. ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ಧನ್ಯತೆಯನ್ನು ಮೂಡಿಸಿದೆ. ಈ ಪ್ರಶಸ್ತಿಯ ಗೌರವವನ್ನು ಮುಂಬಯಿ ನೆಲದಲ್ಲಿ ನನ್ನ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಿದ ತುಳುಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದರು. ಸಾಹಿತ್ಯೋತ್ಸವದಲ್ಲಿ ಸಮಾಜಮುಖಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಬಸವರಾಜ ಬಳ್ಕೊಳ್ಳಿ, ಬಿ.ಎಸ್.ಪಾಟೀಲ, ಸೋಮಶೇಖರ ಗೌಡ ಪಾಟೀಲ, ನಾಗರಾಜ್ ಆರ್.ಜುಮ್ಮನ್ನವರ,ಖ್ಯಾತ ಕವಯಿತ್ರಿ ಮಮತಾ ಅರಸೀಕೆರೆ, ಪತ್ರಕರ್ತ ಡಾ.ಜಗದೀಶ್ ಅಂಗಡಿ, ಪದಮಚಂದ್ ಮೆಹತಾ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಮತ್ತು ಎಚ್.ಎಸ್. ಪಾಟೀಲ ಉಪಸ್ಥಿತರಿದ್ದರು.


