ಮಹಾರಾಷ್ಟ್ರ ಘಟಕದ ಚುನಾವಣಾಧಿಕಾರಿ ಆಗಿ ಸಿಎ| ಜಗದೀಶ್ ಬಿ.ಶೆಟ್ಟಿ ನೇಮಕ

ಬೆಂಗಳೂರು:, ಅ.14: ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿಧಿಕ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕರ್ನಾಟಕ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್‌ಸ್ ಕೆಯುಡಬ್ಲ್ಯೂಜೆ) ಇದರ 2025-2028ನೇ ಅವಧಿಯ ಆಡಳಿತ ಮಂಡಳಿ ಆಯ್ಕೆಯಾಗಿ ಕೆಯುಡಬ್ಲ್ಯೂಜೆ ಮುಖ್ಯ ಚುನಾವಣಾಧಿಕಾ ರಿ ಎನ್.ರವಿಕುಮಾರ್ (ಟೆಲೆಕ್ಸ್) ಚುನಾವಣೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.ಈ ಬಾರಿ ಹೊರನಾಡ ಕನ್ನಡಿಗರ ರಾಜ್ಯಗಳಾದ ಮಹಾರಾಷ್ಟ್ರದ (ಮುಂಬಯಿ) ಮತ್ತು ಕೇರಳ (ಕಾಸರಗೋಡು) ಘಟಕಗಳೂ ಚುನಾವಣೆಯ ಭಾಗವಾಗಲಿದ್ದು, ಕೆಯುಡಬ್ಲ್ಯೂಜೆ ಕೇಂದ್ರ ಸಮಿತಿಯ ಆಡಳಿತ ಮಂಡಳಿ ಆಯ್ಕೆಗಾಗಿ ಮುಂಬಯಿ, ಕಾಸರಗೋಡು ಕೆಯುಡಬ್ಲ್ಯೂಜೆ ಘಟಕಗಳಲ್ಲೂ ಮತದಾನ ನಡೆಯಲಿದೆ. ಮಹಾರಾಷ್ಟ್ರದ (ಮುಂಬಯಿ) ಘಟಕದ ಚುನಾವಣಾಧಿಕಾರಿ ಆಗಿ ಸಿಎ| ಜಗದೀಶ್ ಬಿ.ಶೆಟ್ಟಿ ಸುರತ್ಕಲ್ ಇವರನ್ನು ನೇಮಿಸಲಾಗಿದ್ದು, ನೇಮಿಸಿ ಕೆಯುಡಬ್ಲ್ಯೂಜೆ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಸುತ್ತೂಲೆ ಹೊರಡಿಸಿದ್ದಾರೆ ಎಂದು ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 9,000ಕ್ಕೂ ಹೆಚ್ಚು ಸಕ್ರೀಯ ಕಾರ್ಯನಿರತ ಪತ್ರಕರ್ತ ಸದಸ್ಯರುಗಳನ್ನೊಳಗೊಂಡ ರಾಷ್ಟ್ರದ ಬೃಹತ್ ಸಂಘಟನೆ ಕೆಯುಡಬ್ಲೂ ಜೆ ಆಗಿದೆ. ಕಾರ್ಮಿಕ ಇಲಾಖೆಯ ಉಸ್ತುವಾರಿಯಲ್ಲಿ ಸಂಘದ ರಾಜ್ಯ ಘಟಕವೂ ಸೇರಿದಂತೆ ಎಲ್ಲಾ ಜಿಲ್ಲಾ ಘಟಕಗಳ ಆಡಳಿತ ಮಂಡಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.
ಕಳೆದ ಸೋಮವಾರ (ಅ.12) ಚುನಾವಣಾ ಅಧಿಸೂಚನೆ ಹೊರಡಿಸಿದ್ದು ಅಂದೇ ವೇಳಾಪಟ್ಟಿ ಪ್ರಕಟಗೊಳಿಸಿ ಮತದಾರರ ಕರಡು ಪ್ರತಿ ಪ್ರಕಟಗೊಳಿಸಿದ್ದಾರೆ. ಬರುವ ಭಾನುವಾರ (ಅ.19) ದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಲಿದೆ. ಅ.28 ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರಗಳನ್ನು ಹಿಂತೆಗೆದು ಕೊಳ್ಳಲು ಅ.30 ಕೊನೆಯ ದಿನವಾಗಿರುತ್ತದೆ ಎಂದೂ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನ.09 ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೇಂದ್ರ (ಕೆಯುಡಬ್ಲ್ಯೂಜೆ) ಕಚೇರಿ, ಕಂದಾಯ ಭವನ 3ನೇ ಮಹಡಿ, ಕೆ.ಜಿ ರಸ್ತೆ, ಬೆಂಗಳೂರು-09 ಮತ್ತು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 9:00 ರಿಂದ ಮದ್ಯಾಹ್ನ 3:00 ಗಂಟೆ ವರೆಗೆ ಮತದಾನ ನಡೆಯಲಿದೆ. ಮತದಾನ ಬಳಿಕ ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುವುದು ಎಂದೂ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ತಿಳಿಸಿದ್ದಾರೆ. ಸಹಾಯಕ ಚುನಾವಣಾ ಅಧಿಕಾರಿಯಾಗಿ ಕೆ.ಆರ್ ದೇವರಾಜು ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.
ನ.09ರಂದು ಕೇವಲ ಕೆಯುಡಬ್ಲ್ಯೂಜೆ ಕೇಂದ್ರ ಸಮಿತಿಗೆ ಮಾತ್ರ ಚುನಾವಣೆ ನಡೆಸಲಾಗುತ್ತದೆ. 2024ರ ಡಿಸೆಂಬರ್, 23ರಂದು ಮಹಾರಾಷ್ಟ್ರ ಘಟಕಕ್ಕೆ ಕೇಂದ್ರ ಸಮಿತಿಯ ಸಮ್ಮುಖದಲ್ಲೇ 2024-2027ರ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಆದರೆ ಕಳೆದ ಭಾನುವಾರ (ಅ. 12 ನಡೆಸಲಾದ ಮಹಾ ಘಟಕದ ಕಾರ್ಯಕಾರಿ ಸಮಿತಿ ಮತ್ತು ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೆಲವೊಂದು ಕಾರಣಗಳಿಂದಾಗಿ ಪದಾಧಿಕಾರಿಗಳ ಬದಲಾವಣೆಯ ಬಗ್ಗೆ ಚಿಂತಿಸಲಾಗಿದೆ ಎಂದು ಗೌರವ ಪ್ರಧಾನ ಕಾರ್ಯದರ್ಶಿ ಡಾ| ಶಿವ ಮೂಡಿಗೆರೆ ತಿಳಿಸಿದ್ದಾರೆ.




