
ಮಂಗಳಗಂಗೋತ್ರಿ: ಬ್ರಿಟಿಶ್ ಕೌನ್ಸಿಲ್ ಲಂಡನ್ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಹಯೋಗದೊಂದಿಗೆ ಸೆಪ್ಟೆಂಬರ್ 13 ರಿಂದ 25 ರವರೆಗೆ ಇಂಗ್ಲೆಂಡಿನಲ್ಲಿ ನಡೆಯಲಿರುವ ಕರ್ನಾಟಕ ಲೀಡರ್ ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂನಲ್ಲಿ ಭಾಗವಹಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್ ಧರ್ಮ ಅವರು ತೆರಳಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ. ಎಸ್ ಕೆ ನಿರಂಜನ ಇವರ ನೇತೃತ್ವದಲ್ಲಿ ಇಂಗ್ಲೇಂಡಿಗೆ ತೆರಳುತ್ತಿರುವ 10 ಪ್ರತಿನಿಧಿಗಳ ಈ ತಂಡದಲ್ಲಿ ಪ್ರೊ.ಪಿ.ಎಲ್ ಧರ್ಮ ಇವರು ಭಾಗಿಯಾಗಿದ್ದಾರೆ. ಎರಡು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದ ಸಂದರ್ಭದಲ್ಲಿ ಇಂಗ್ಲೆಂಡಿನ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಭೇಟಿಕೊಟ್ಟು ಅವರ ಜೊತೆಗೆ ಸಂವಾದ, ಅಲ್ಲಿನ ವಿಶ್ಬವಿದ್ಯಾನಿಲಯಗಳ ಶೈಕ್ಷಣಿಕ ವ್ಯವಸ್ಥೆಯ ಅಧ್ಯಯನ, ಸಹಯೋಗದ ಕಾರ್ಯ ನಿರ್ವಹಣೆಯ ಕುರಿತ ಚರ್ಚೆ, ಒಪ್ಪಂದಗಳ ಕುರಿತು ಮಾತುಕತೆ ಇತ್ಯಾದಿಗಳನ್ನು ನಡೆಸಲಿದ್ದಾರೆ.
ಅಧ್ಯಯನ ತಂಡದಲ್ಲಿ ಮಂಗಳೂರು ವಿವಿಯಲ್ಲದೆ ಮೈಸೂರು, ಧಾರವಾಡ, ದಾವಣಗೆರೆ ವಿವಿಗಳ, ಉನ್ನತ ಶಿಕ್ಷಣ ಪರಿಷತ್ತಿನ ಪ್ರತಿನಿಧಿಗಳು, ಅಧಿಕಾರಿಗಳು, ಇಂಗ್ಲೆಂಡಿನ ಬ್ರಿಟಿಷ್ ಕೌನ್ಸಿಲ್, ಕಾರ್ಡಿಫ್, ಬ್ಯಾಂಗೋರ್, ರೆಕ್ಸಾಂ, ಕಾರ್ಡಿಫ್ ಮೆಟ್ರೋಪೊಲಿಟನ್,ವೇಲ್ಸ್ ಟ್ರಿನಿಟಿ ಸೈಂಟ್ ಡೇವಿಡ್ ವಿಶ್ವವಿದ್ಯಾನಿಲಯಗಳ ಹಿರಿಯ ಪ್ರಾಧ್ಯಾಪಕರು, ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಿಂದ ಮುಂದಿನ ದಿನಗಳಲ್ಲಿ ಸಂಶೋಧನೆ, ನಾಯಕತ್ವ ಹಾಗೂ ಶೈಕ್ಷಣಿಕ ಚಟುವಟಿಕೆಗಳು ರಾಜ್ಯದ ವಿಶ್ವವಿದ್ಯಾನಿಲಯಗಳ ನಡುವೆ ವೃದ್ಧಿಯಾಗಬಹುದೆಂದು ನಿರೀಕ್ಷಿಸಲಾಗಿದೆ.


