ಕೊಣಾಜೆ: ಮಂಗಳೂರು ವಿವಿ ಜೀವವಿಜ್ಞಾನ ವಿಭಾಗದ ಉಪನ್ಯಾಸಕರಾದ ಡಾ. ದಿವಾಕರ್ ಎಂ. ಎಸ್. ಅವರ ಇಂಡಿಯನ್ ಡಯಾಬಿಟಿಸ್ ಕಿಚನ್ – ಟ್ರೆಡಿಷನಲ್ ಫುಡ್ ಫಾರ್ ಗುಡ್ ಹೆಲ್ತ್ “Indian Diabetes Kitchen – Traditional Foods for Good Health” ಎಂಬ ಕೃತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರು ಶುಕ್ರವಾರ ಬಿಡುಗಡೆಗೊಳಿಸಿದರು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “ಡಾ. ದಿವಾಕರ್ ಅವರ ಕೃತಿಯು ಭಾರತೀಯ ಪಾರಂಪರಿಕ ಆಹಾರದ ವೈಜ್ಞಾನಿಕ ಅಂಶಗಳನ್ನು ಜನರಿಗೆ ಸರಳವಾಗಿ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ. ಇಂತಹ ಪುಸ್ತಕಗಳು ಆಹಾರ ವಿಜ್ಞಾನ ಮತ್ತು ಪೌಷ್ಠಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ರಾಜು ಮೊಗವೀರ ಕೆ ಅವರು ಮಾತನಾಡಿ, ಈ ಕೃತಿಯು ಸಂಶೋಧನೆ ಮತ್ತು ಆರೋಗ್ಯಕರ ಜೀವನ ಶೈಲಿಯ ಕಡೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಶ್ಲಾಘಿಸಿದರು.ಪ್ರಾಧ್ಯಾಪಕ ಪ್ರೊ. ರಾಜು ಕೃಷ್ಣ ಸಿ.ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಹಾರ ವಿಜ್ಞಾನ ಮತ್ತು ಪೌಷ್ಠಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವಿಶ್ವವಿದ್ಯಾಲಯದ ಗಣ್ಯರು ಉಪಸ್ಥಿತರಿದ್ದರು.


