
ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ ಒಂದು ಕಾಲದಲ್ಲಿ ಕರಾವಳಿ ಭಾಗದ ಜನರ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿ ಸುವರ್ಣ ಯುಗವನ್ನು ಕಂಡಿತ್ತು. ಸದ್ಯ ಬಹುತೇಕ ವಿಶ್ವವಿದ್ಯಾಲಯಗಳು ಸಂಘರ್ಷದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ವಿಶ್ವವಿದ್ಯಾನಿಲಯದ ಬೆಳವಣಿಗೆಯಲ್ಲಿ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳೋಣ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಸದೃಢವಾದ ಯೋಜನೆ, ರಚನಾತ್ಮಕ ಮಾದರಿಗಳೊಂದಿಗೆ ಅನುಷ್ಠಾನಗೊಳಿಸಬೇಕಿದೆ ಎಂದು ಎಂದು ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಹೇಳಿದರು.
ಅವರು ಬುಧವಾರ ವಿವಿಯ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 46 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ವಿವಿಯು ಉನ್ನತ ಶಿಕ್ಷಣದ ಹಲವು ಕನಸುಗಳೊಂದಿಗೆ ನೂರಾರು ಮನಸ್ಸುಗಳು ಒಗ್ಗೂಡುವಿಕೆಯೊಂದಿಗೆ ಕೊಣಾಜೆಯಲ್ಲಿ ಆರಂಭಗೊಂಡಿತ್ತು. ವಿವಿಯು ಸ್ಥಾಪನೆಯಾಗಿ ಸಾಗಿ ಬಂದ ಹಾದಿ, ಹೆಜ್ಜೆಗುರುತುಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿಶ್ವವಿದ್ಯಾಲಯದ ಬೇರುಗಳು, ಇತಿಹಾಸ, ಉದ್ದೇಶಗಳನ್ನು ಅರ್ಥಮಾಡಿಕೊಳ್ಳದೆ ಮುನ್ನಡೆಯಲು ಸಾಧ್ಯವಿಲ್ಲ. ಮಂಗಳೂರು ವಿವಿ ಸ್ಥಾಪನೆಯಾಗುವಾಗ ಇರುವ ಆಶಯದಂತೆ ಶಿಕ್ಷಣದೊಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನೂ ಮಾಡಿದೆ. ವಿವಿಗಳು ಕೆಲಸಗಳಿಂದ ಸಂಶೋಧನೆಗಳಿಂದ ಗುರುತಿಸಬೇಕೇ ಹೊರತು ಸವಲತ್ತುಗಳಿಂದಲ್ಲ ಎಂದು ಹೇಳಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಂಗಳೂರು ವಿವಿಯು ಅನೇಕ ಸವಾಲುಗಳ ನಡುವೆಯೂ ಶೈಕ್ಷಣಿಕ ಸಾಧನೆಗಳ ಮೂಲಕ ಮುನ್ನಡೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳಿಗೆ, ಚರ್ಚೆಗಳಿಗೆ ತೆರೆದುಕೊಂಡು ವಿಶ್ವವಿದ್ಯಾನಿಲಯವು ಮುನ್ನಡೆಯಲಿದೆ. ಪರಿಶ್ರಮ ಮತ್ತು ತ್ಯಾಗಮಯಿಯಾಗಿದ್ದುಕೊಂಡು ವಿವಿಯ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳೋಣ ಎಂದರು.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಯನ್ನು ಸಲ್ಲಿಸಿದರು.
ಮಂಗಳೂರು ವಿವಿ ಕುಲಸಚಿವರಾದ ರಾಜು ಮೊಗವೀರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ.ಗಣೇಶ್ ಸಂಜೀವ ಅವರು ವಂದಿಸಿದರು. ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.
ನೂತನ ತಂತ್ರಾಂಶಗಳ ಲೋಕಾರ್ಪಣೆ
ಮಂಗಳೂರು ವಿಶ್ವವಿದ್ಯಾನಿಲಯವು ತನ್ನ 46 ನೇ ಸಂಸ್ಥಾಪನಾ ದಿನಾಚರಣೆಯ ಸುಸಂದರ್ಭದಲ್ಲಿ ಪರೀಕ್ಷಾಂಗ ವಿಭಾಗದ ವತಿಯಿಂದ ‘ಆನ್ ಲೈನ್ ಸರ್ಟಿಫಿಕೇಟ್ ಮ್ಯಾನೇಜ್ಮೆಂಟ್ ಸಿಸ್ಟಮ್'(MU-DigiCert) ಹಾಗೂ ‘ಆನ್ಲೈನ್ ಪಿಎಚ್ ಡಿ ಟ್ರಾಕಿಂಗ್ ಸಿಸ್ಟಮ್ ‘(MU-phDTrack)ನ್ನು ಲೋಕಾರ್ಪಣೆಗೊಳಿಸಲಾಯಿತು.
ಆನ್ ಲೈನ್ ಸರ್ಟಿಫಿಕೇಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶದಲ್ಲಿ ಪರೀಕ್ಷಾ ಸಂಬಂಧಿತ ಪ್ರಮಾಣ ಪತ್ರಗಳ ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸಿ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಮಂಗಳೂರು ವಿವಿಯ ಕಂಪ್ಯೂಟರ್ ಸೆಂಟರ್ , ಆನ್ ಲೈನ್ ಪೋರ್ಟಲ್ ಮೂಲಕ ಪ್ರಮಾಣ ಪತ್ರ, ಪ್ರತಿಲಿಪಿ, ಎರಡನೇ ಮೂಲಪ್ರತಿ ಪ್ರಮಾಣಪತ್ರ ಮೊದಲಾದ ಸೇವೆಗಳಿಗಾಗಿ ಈ ಸಾಪ್ಟ್ ವೇರ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಪಿಎಚ್ ಡಿ ಟ್ರ್ಯಾಕಿಂಗ್ ಸಿಸ್ಟಮ್ ನಲ್ಲಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮೈಲಿಗಲ್ಲು, ಕೋರ್ಸ್ ವರ್ಕ್ , ಪ್ರಕಟನೆಗಳು ಮತ್ತು ಪ್ರಗತಿ ವರದಿಗಳನ್ನು ಆನ್ಲೈನ್ ನಲ್ಲಿ ನಿಯಮಿತವಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಪೋರ್ಟಲ್ ಮೂಲಕ ಪ್ರತೀ ಹಂತದಲ್ಲಿ ಸಲ್ಲಿಕೆಗಳನ್ನು ಪರಿಶೀಲಿಸಬಹುದು , ಪ್ರತಿಕ್ರಿಯೆ ನೀಡಬಹುದು ಹಾಗೂ ಪ್ರಗತಿಯನ್ನು ಅನುಮೋದಿಸಬಹುದಾಗಿದೆ.