ಕೊಣಾಜೆ: ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರಲ್ಲ. ನಾವು ಸಾಧನೆಯ ಗುರಿ, ಉದ್ದೇಶ, ಕಠಿಣ ಪರಿಶ್ರಮದೊಂದಿಗೆ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ಧನಾತ್ಮಕ ಚಿಂತನೆಯೊಂದಿಗೆ ಸಾಧಿಸಬೇಕೆನ್ನುವ ತುಡಿತವಿದ್ದರೆ ಬದುಕು ಬೆಳಗುವುದರಲ್ಲಿ ಸಂಶಯವಿಲ್ಲ ಎಂದು ಚಲನಚಿತ್ರ ನಟ, ನಿರ್ದೇಶಕ ಜೆ.ಪಿ.ತೂಮಿನಾಡು ಅವರು ಹೇಳಿದರು.

ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಣೇಮಪಾಲನಾ ನಿರ್ದೇಶನಾಲಯ ಇದರ ವತಿಯಿಂದ 2025-26 ನೇ ಸಾಲಿನ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಮೂರು ದಿನಗಳ ಪ್ರತಿಭಾ ಪ್ರತಿಭಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಓರ್ವ ಗೆಳೆಯ ನೀಡಿದ ಪುಸ್ತಕ ಜೀವನದ ಕನಸು ಬಿತ್ತಿತು. ಯಶಸ್ಸಿಗೆ ಏನು ಮಾಡಬೇಕೆನ್ನುವ ಅನೇಕ ಉದಾಹರಣೆಗಳಿದ್ದವು. ಸಾಧಕರ ಯಶಸ್ಸಿನ ವೀಡಿಯೋ ನೋಡಲಾರಂಭಸಿದೆ. ಬದುಕಿನ ಸ್ಪೂರ್ತಿಯೊಂದಿಗೆ ಬರವಣಿಗೆಯ ಆಸಕ್ತಿ ಮೂಡಿಸಿತು. ಈ ಎಲ್ಲಾ ಅಂಶಗಳು ಹೋಟೆಲ್ ಕ್ಲೀನರ್ ,ಪೈಂಟರ್ ಆಗಿದ್ದ ನನ್ನನ್ನು ನಟನಾಗಿ, ನಿರ್ದೇಶಕನಾಗಿ ಬೆಳೆಸುವಂತೆ ಮಾಡಿತು. ಇನ್ನಷ್ಟು ಸಾಧನೆ ಮಾಡಬೇಕೆನ್ನುವ ಕನಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ ವಹಿಸಿ ಮಾತನಾಡಿ, ಅವರು ಮಾತನಾಡಿ, ಜೀವನದಲ್ಲಿ ಸವಾಲುಗಳನ್ನು ಮೀರಿ ನಮ್ಮ ನಂಬಿಕೆಯೊಂದಿಗೆ ಮುನ್ಮಡೆದರೆ ಯಶಸ್ಸು ನಮ್ಮದಾಗುತ್ತದೆ. ಬದುಕನ್ನು ಕಟ್ಟುವ ಶಕ್ತಿ ನಮಗಿರಬೇಕಾದರೆ ಸಮಾಜವನ್ನು, ದೇಶವನ್ನು ಕಟ್ಟುವ ಸಾಮರ್ಥ್ಯವೂ ನಮಗಿದೆ. ಆದ್ದರಿಂದ ಶಿಕ್ಷಣದೊಂದಿಗೆ ಎರಡು ವರ್ಷದಲ್ಲಿ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯಶ್ವಿನ್ ಕೆ.ಪಿ, ಪದಾಧಿಕಾರಿಗಳಾದ ಕಾರ್ಯದರ್ಶಿ ನಿಹಾಲ್ ಎನ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಶ ಕೆ, ಉಪಾಧ್ಯಕ್ಷರಾದ ಅಪೇಕ್ಷ ಎಚ್ ಆಳ್ವ, ಸಹಕಾರ್ಯದರ್ಶಿ ಮಿಲನ್ ಮುತ್ತಣ್ಣ, ಸಹ ಸಾಂಸ್ಕೃತಿ ಕಾರ್ಯದರ್ಶಿ ಕೇಸರಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೆಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯಶ್ವಿನ್ ಕೆ.ಪಿ ಅವರು ವಂದಿಸಿದರು. ವೈಷ್ಣವಿ ಯೋಗೀಶ್ ನಿರೂಪಿಸಿದರು.


