ಕೊಣಾಜೆ: ರಾಮಾಯಣ ಮಹಾಕಾವ್ಯ ಸಾರ್ವಕಾಲಿಕ ಮೌಲ್ಯವನ್ನು ಹೊಂದಿದ್ದು ಪ್ರಸ್ತುತವಾಗಿದೆ. ರಾಮಾಯಣ ಅವರವರ ವ್ಯಾಖ್ಯಾನಕ್ಕೆ ಅನುಸಾರವಾಗಿ ಬೆಳೆಯುತ್ತಾ ಹೋಗಿದೆ. ಅಂತಹ ಮಹಾಕಾವ್ಯವನ್ನು ಒದಗಿಸಿದ ವಾಲ್ಮೀಕಿ ಮಹರ್ಷಿಗಳು ಪ್ರಾತ:ಸ್ಮರಣೀಯರು ಎಂದು ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ ಅವರು ಹೇಳಿದರು.
ಅವರು ಮಂಗಳೂರು ವಿವಿಯ ಎಸ್ ವಿಪಿ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ನಡೆದ ವಾಲ್ಮಿಕಿ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶ ವಿದೇಶಗಳಲ್ಲೂ ಇಂದು ರಾಮಾಯಣದ ಐತಿಹ್ಯಗಳು ಕಾಣಸಿಗುತ್ತವೆ. ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸಿದ, ಪ್ರತಿಬಿಂಬಿಸಿದ ಕಾವ್ಯ ರಾಮಾಯಣ .ಅದನ್ನು ಜಗತ್ತಿನ ಕಾವ್ಯಗಳೊಂದಿಗೆ ಹೋಲಿಸಿ ಗಮನಿಸಬೇಕಿದೆ ಎಂದು ಅವರು ಹೇಳಿದರು.
ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಮಾತನಾಡಿ, ನಮ್ಮ ದೇಶಕ್ಕೆ ಸಂಸ್ಕತಿ,ಸಮಾಜದ ಒಂದು ಚಿತ್ರಣ ಕೊಟ್ಟವರು ವಾಲ್ಮಿಕಿಯಂತಹ ಮಹಾತ್ಮರಾಗಿದ್ದಾರೆ. ಅವರು ಬರೆದ ಕಾವ್ಯಕ್ಕೆ ಮಹತ್ವವಾದ ಸ್ಥಾನವಿದೆ ಎಂದರು.
ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ, ಕಾಡಿನಲ್ಲಿ ಬೇಡನಾಗಿ, ಕ್ರೂರಿಯಾಗಿದ್ದ ವ್ಯಕ್ತಿ, ಕೊನೆಯಲ್ಲಿ ಕಾಡಿನಲ್ಲಿ ಅನಾಥಳಾದ ಸೀತೆಯನ್ನು ಪೊರೆದ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿರುವುದು ಬದುಕಿನ ಮಾಗುವಿಕೆಯ ಮಾದರಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಭಾಗದ ಅಧ್ಯಕ್ಷರಾದ ಡಾ.ನಾಗಪ್ಪ ಗೌಡ ಅವರು, ರಾಮಾಯಣ, ಮಹಾಭಾರತ ಕಾವ್ಯವು ಭರತಖಂಡದ ಜನಮಾನಸದ ಮೇಲೆ ಪ್ರಭಾವ ಬೀರಿರುವ ಕಾವ್ಯಗಳಾಗಿವೆ.
ಸಾರ್ವಕಾಲಿಕ ಪ್ರಭಾವಕ್ಕೆ ಒಳಗಾಗುವ ಈ ಕಾವ್ಯ ಅತ್ಯಂತ ಶ್ರೇಷ್ಠವಾದುದು. ಕಾವ್ಯದಲ್ಲಿರುವ ಸಾರ್ವಕಾಲಿಕವಾದ ಜೀವನ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು.
ವಿದ್ಯಾರ್ಥಿಗಳ ಪರವಾಗಿ ರಾಜಶ್ರೀ ರೈ ಪೆರ್ಲ ಅವರು ಮಾತನಾಡಿದರು.
ಡಾ.ಯಶುಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ವಿವಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ, ರಾಮಾಯಣದಲ್ಲಿ ಸಾರ್ವಕಾಲಿಕ ಮೌಲ್ಯವಿದೆ: ರಾಜು ಮೊಗವೀರ
Date:


