ಕಲೆಗೆ ಜಾತಿಯ ಹಂಗಿಲ್ಲ: ಅಚ್ಯುತ ಗಟ್ಟಿ
ಕೊಣಾಜೆ: ಯಕ್ಷಗಾನದಲ್ಲಿ ಗುರುಮುಖೇನ ಶಿಕ್ಷಣ ಪಡೆಯುವಷ್ಟೇ ನೋಡಿ ಕಲಿಯುವ ವಿಷಯಗಳೂ ಅನೇಕ ಇವೆ. ಇಂದಿನ ಕಾಲದಲ್ಲಿ ಯಕ್ಷಗಾನ ಕಲೆ ಸಾಮಾಜಿಕ ಸಾಮರಸ್ಯದ ಸಂಕೇತವಾಗಿದ್ದು, ಕಲೆಗೆ ಯಾವುದೇ ಜಾತಿ ಧರ್ಮಗಳ ಹಂಗಿಲ್ಲ, ಯಕ್ಷಗಾನದಲ್ಲಿ ಎಲ್ಲಾ ಜಾತಿ ಧರ್ಮಗಳ ಕಲಾವಿದರು ಇರುವುದನ್ನು ಗಮನಿಸಬಹುದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಅಚ್ಯುತಗಟ್ಟಿ ಅವರು ಅಭಿಪ್ರಾಯಪಟ್ಟರು.

.ಅವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಯಕ್ಷಮಂಗಳ ತಂಡದ 2025-26 ನೇ ಸಾಲಿನ ಯಕ್ಷ ನಾಟ್ಯ ತರಬೇತಿಯ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು. ಶಿಕ್ಷಣದೊಂದಿಗೆ ಯಕ್ಷಗಾನ, ರಾಷ್ಟ್ರೀಯ ಸೇವಾ ಯೋಜನೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವ, ನಾಯಕತ ರೂಪುಗೊಳ್ಳಲು ಸಾಧ್ಯ ಎಂದರು.
ಯಕ್ಷಗಾನ ವಿಶ್ವಕಲೆಯಾಗಲಿದೆ:
ಯಕ್ಷಗಾನ ಗುರುಗಳಾದ ದೀವಿತ್ ಕೋಟ್ಯಾನ್ ಅವರು ಮಾತನಾಡಿ, ಯಕ್ಷಗಾನಕ್ಕೆ ಆಸಕ್ತರು ಹೆಚ್ಚಾಗುತ್ತಿದ್ದಾರೆ. ಪಾರಂಪರಿಕ ಯಕ್ಷಗಾನವನ್ನು ಆರೋಗ್ಯಕರವಾಗಿ ಸಂಪ್ರದಾಯ ಬದ್ಧವಾಗಿ ಮುನ್ನಡೆಸುವ ಜವಾಬ್ಧಾರಿ ನಮ್ಮೆಲ್ಲರದ್ದಾಗಿದೆ. ಯಕ್ಷಗಾನ ಕಲೆಯು ಭವಿಷ್ಯದಲ್ಲಿ ವಿಶ್ವಕಲೆಯಾಗಿ ರೂಪುಗೊಳ್ಳುವುದಲ್ಲಿ ಸಂಶಯವಿಲ್ಲ ಎಂದರು. ಯಕ್ಷಗಾನ ಕೇಂದ್ರ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ, ಯಕ್ಷಗಾನ ಶಿಕ್ಷಣದ ಭಾಗವಾಗಿದ್ದ ಪೂರ್ವರಂಗ ಇಂದು ಪ್ರದರ್ಶನ ದಲ್ಲಿ ಮರೆಯಾಗುತ್ತಿರುವುದರಿಂದ ಯಕ್ಷಗಾನ ವನ್ನು ಕಲಿಸುವ ಕೇಂದ್ರಗಳಿಗಿಂದು ಮಹತ್ವ ಬಂದಿದೆ. ಪರಂಪರೆಯನ್ನು ಮರೆಯದೆ ವರ್ತಮಾನಕ್ಜೆ ಪೂರಕವಾಗುವಂತೆ ಯಕ್ಷಶಿಕ್ಷಣವು ರೂಪುಗೊಳ್ಳಬೇಕಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸ್ವಾತಿ ರಾವ್ ಅವರು ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿ ಲಕ್ಷ್ಮೀಕಾಂತ್ ಪ್ರಾರ್ಥಿಸಿದರು. ಬಳಿಕ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಗೆ ಯಕ್ಷಗಾನ ಗುರುಗಳಾದ ದೀವಿತ್ ಕೋಟ್ಯಾನ್ ಅವರು ಯಕ್ಷಗಾನ ಹೆಜ್ಜೆಗಾರಿಕೆಯ ಕುರಿತು ಮಾಹಿತಿ ನೀಡಿದರು.


