ಮೂಡುಬಿದಿರೆ : ಇಲ್ಲಿನ ಕಾಳಿಕಾಂಬಾ ಮಹಿಳಾ ಸಮಿತಿಯ ರಜತ ಸಂಭ್ರಮದಂಗವಾಗಿ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನ.16ರಂದು ಸಾಮೂಹಿಕ ದುರ್ಗಾ ಪೂಜೆ ಹಾಗೂ ಅವಿಭಜಿತ ದ.ಕ ಜಿಲ್ಲಾ ಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶವು ನಡೆಯಲಿದೆ ಎಂದು ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾಯ೯ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ 30 ಮಂದಿ ಅರ್ಹ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ನಡೆಯಲಿದೆ. ಅವಿಭಜಿತ ದ. ಕ ಜಿಲ್ಲಾ ಮಟ್ಟದಲ್ಲಿ ವಿಶ್ವಕರ್ಮ ಮಹಿಳೆಯರಿಗಾಗಿ ನಡೆಸಿದ ಸಾಂಸ್ಕೃತಿಕ ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಹಾಗೂ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡ ತಂಡಗಳಿಗೆ ಪ್ರಮಾಣ ಪತ್ರವನ್ನು ಸಂದರ್ಭದಲ್ಲಿ ನೀಡಲಾಗುವುದು. ಸಮಿತಿಯ ಮಾಜಿ ಅಧ್ಯಕ್ಷರುಗಳನ್ನು ಇದೇ ಗೌರವಿಸಲಾಗುವುದು ಎಂದರು.
ನ. 16ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಮಹಿಳಾ ಸಮಾವೇಶದಲ್ಲಿ ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲನೆಗೊಳಿಸಲಿದ್ದಾರೆ.
ಸರಸ್ವತಿ ಮಾತೃ ಮಂಡಳಿಯ ಗೌರವಾಧ್ಯಕ್ಷೆ ಸರಳಮ್ಮ ಗುರುನಾಥ ಸ್ವಾಮೀಜಿ ಶುಭಾಶಂಸನೆ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಲಿದ್ದಾರೆ. ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಲಿದ್ದು ರಾಜ್ಯ ಶಿಕ್ಷಾ ಫೌಂಡೇಶನ್ನ ನಿರ್ದೇಶಕಿ ಅನಿತಾಲಕ್ಷ್ಮೀ ಆಚಾರ್ಯ ದಿಕ್ಕೂಚಿ ಭಾಷಣ ಗೈಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಕೆ ಬಾಲಕೃಷ್ಣ ಆಚಾರ್ಯ ಉಳಿಯ, ಮಾಜಿ ಮೊತ್ತೇಸರರಾದ ಡಾ. ಜಿ. ರಾಮಕೃಷ್ಣ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ಜಯಕರ ಎನ್. ಆಚಾರ್ಯ ಲಾಡಿ ಭಾಗವಹಿಸಲಿದ್ದಾರೆ. ಕ್ಷೇತ್ರದ ಮೊಕೇಸರರಾದ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ ಹಾಗೂ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಉಪಸ್ಥಿತರಿರುವರು.
ಅವಿಭಜಿತ ದ.ಕ ಜಿಲ್ಲೆಯ ಕಾಳಿಕಾಂಬಾ ದೇವಾಲಯಗಳ ಅಧೀನದಲ್ಲಿರುವ 14 ಮಹಿಳಾ ಮಂಡಳಿಗಳ ಅಧ್ಯಕ್ಷರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ ಮಾತನಾಡಿ ಧಾಮಿ೯ಕ ಕಾಯ೯ಕ್ರಮಗಳು ಮುಗಿದ ನಂತರ ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಮೊಕೇಸರ ಎಂ. ಕೆ ಬಾಲಕೃಷ್ಣ ಆಚಾರ್ಯ, ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ, ಕೋಶಾಧಿಕಾರಿ ವಿದ್ಯಾ ಸುರೇಶ್ ಆಚಾರ್ಯ, ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕೋಶಾಧಿಕಾರಿ ಅರವಿಂದ್ ಆಚಾರ್ಯ ಉಪಸ್ಥಿತರಿದ್ದರು.


