ಮಂಗಳೂರು: ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು (BSWT) ಇದರ 2025ನೇ ಸಾಲಿನ BSWT ವರ್ಷದ ವ್ಯಕ್ತಿ ಪ್ರಶಸ್ತಿಗೆ ಹಿರಿಯ ಸಮಾಜ ಸೇವಕ ಉಡುಪಿ ಮೂಲದ ಶ್ರೀ ದಿನೇಶ್ ಪೈ ಅವರನ್ನು ಆಯ್ಕೆ ಮಾಡಲಾಗಿದೆ.

ನಿಸ್ವಾರ್ಥ ಸಮಾಜ ಸೇವಕರಾದ ದಿನೇಶ್ ಪೈಯವರು ಸರಕಾರದ ಸಹಾಯಧನ ಮತ್ತು ದಾನಿಗಳ ನೆರವಿನಿಂದ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.18 ವರ್ಷಗಳಿಂದ ಸುಮಾರು 700 ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಕಡುಬಡವರಿಗೆ, ವಿಶಿಷ್ಟ ಚೇತನರಿಗೆ, ವೃದ್ಧರಿಗೆ ಸಹಾಯ ಮಾಡುವುದು ಅಪಘಾತಗೊಂಡ ಬಡ / ನಿರುದ್ಯೋಗಿಗಳಿಗೆ 15 ದಿನಗಳವರೆಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಾರೆ ಮತ್ತು ಬೇಸಿಗೆಯ ಸಮಯದಲ್ಲಿ ನೀರಿನ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಮಾಡಿದ್ದಾರೆ. ಕೊರೋನಾ ಸಂದರ್ಭ ಅರ್ಹ ಕುಟುಂಬಗಳಿಗೆ ದಾನಿಗಳಿಂದ ಹಣ ಸಂಗ್ರಹಿಸಿ ಆಹಾರ ಕಿಟ್ ವಿತರಿಸಿದ್ದಾರೆ. ತನ್ನ ವ್ಯಾಪ್ತಿಯಲ್ಲಿ ಈವರೆಗೆ 400 ಕ್ಕೂ ಅಧಿಕ ಅರ್ಹರಿಗೆ BPL Card ವಿತರಿಸುವ ಕೆಲಸ ಮಾಡಿದ್ದಾರೆ.

2008 ರಲ್ಲಿ ಆರಂಭವಾದ ಇವರ ಸಮಾಜ ಸೇವೆಯಲ್ಲಿ ಮುಖ್ಯವಾಗಿ ಪ್ರತಿ ದಿನ ಬೆಳಿಗ್ಗೆ 10 ರಿಂದ 1 ರವರೆಗೆ ಮೂರು ತಾಸು ನಗರಸಭೆಯಲ್ಲಿ ಲಭ್ಯರಿರುತ್ತಾರೆ. ಅಲ್ಲಿಗೆ ಬರುವ ಎಲ್ಲರಿಗೂ ತನ್ನಿಂದಾಗುವ ಸೇವೆಯನ್ನು ಉಚಿತವಾಗಿ ನೀಡುತ್ತಾರೆ. 75 ವರ್ಷ ವಯಸ್ಸಿನ ಇವರು ಪ್ರತಿದಿನ ಪ್ರತಿ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗನ್ನು ಆಲಿಸಿ ಪರಿಹಾರ ಸೂಚಿಸುತ್ತಾರೆ.
ಊರಿನ ಅರ್ಹರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಪ್ರಯತ್ನ ಮಾಡುತ್ತಾರೆ.
ಎಲೆಮರೆಯ ಕಾಯಿಯಂತೆ ಇಷ್ಟು ವರ್ಷಗಳ ಕಾಲ ಇವರು ಮಾಡಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ 2025 ನೇ ಸಾಲಿನ “BSWT ವರ್ಷದ ವ್ಯಕ್ತಿ”ಯಾಗಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯೂ 25 ಸಾವಿರ ರೂ ನಗದು ಮತ್ತು ಸನ್ಮಾನ ಪತ್ರ, ಫಲಕ, ಫಲ ಹಾಗೂ ಉಡುಗೊರೆಯನ್ನು ಒಳಗೊಂಡಿರುತ್ತದೆ. ದಿನಾಂಕ 24 ಜನವರಿ 2026 ರಂದು ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಇಲ್ಲಿನ ರವೀಂದ್ರ ಕಲಾ ಭವನದಲ್ಲಿ 200 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಹಾಗೂ BSWT ದಶಮಾನೋತ್ಸವದ ಸಮಾರೋಪ ಸಮಾರಂಭದ ಶುಭ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಾರ್ಯದರ್ಶಿ ಆಕಿಫ್ ಇಂಜಿನಿಯರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.


