
ಮುಡಿಪು: ಇತ್ತೀಚಿನ ದಿನಗಳಲ್ಲಿ ಜಾಲತಾಣದ ಪ್ರಭಾವದಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದ್ದು ಮನೆಮನೆ ಗ್ರಂಥಾಲಯ ಅಭಿಯಾನ ಉತ್ತಮ ಯೋಚನೆ ಎಂದು
ಡಯಟ್ ಪ್ರಾಂಶುಪಾಲ ಸದಾನಂದ ಪೂಂಜಾ ಹೇಳಿದರು.
ಮುಡಿಪು ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಸರ್ವೋದಯ ಮಂಟಪದಲ್ಲಿ ನಡೆದ ವಿಶ್ವ ಸಾಕ್ಷರತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಜೀವನ ಕಾರ್ಯಾಧ್ಯಕ್ಷ ರಾಧಾಕೃಷ್ಣ ರೈ ಉಮಿಯ ಮಾತನಾಡಿ, ಹಲವು ವರ್ಷಗಳ ಹಿಂದೆ ಆರಂಭಗೊಂಡ ಸಾಕ್ಷರತಾ ಆಂದೋಲನದ ಫಲವಾಗಿ ವಯಸ್ಕರೂ ಸುಶಿಕ್ಷಿತರಾಗುವಂತೆ ಮಾಡಿದೆ ಎಂದು ತಿಳಿಸಿದರು.
ನಡುಪದವು ಮಸೀದಿಯ ಅಧ್ಯಕ್ಷ ಎನ್.ಎಸ್.ಅಬ್ದುಲ್ ನಾಸೀರ್ ನಡುಪದವು ಮಾತನಾಡಿ, ಮಾನವೀಯ ಗುಣ ಇಲ್ಲದಿದ್ದರೆ ಐಎಎಸ್ ಅಧಿಕಾರಿಯಾಗಿದ್ದರೂ ಆತನ ಶಿಕ್ಷಣ ನಿಷ್ಪ್ರಯೋಜಕ ಎಂದರು.
ಈ ಸಂದರ್ಭ ಸ್ಮೈಲ್ ಸ್ಕಿಲ್ ಸ್ಕೂಲ್‌ನಲ್ಲಿ ಟೈಲರಿಂಗ್ ತರಬೇತಿ ಪಡೆದ ಐವರು ಫಲಾನುಭವಿಗಳಿಗೆ ಸ್ವಉದ್ಯೋಗ ನಿಟ್ಟಿನಲ್ಲಿ ಹೊಲಿಗೆ ಯಂತ್ರ ನೀಡಲಾಯಿತು. ‘ಸಂವಿಧಾನ ಓದು’ ಪುಸ್ತಕ ನೀಡುವ ಮೂಲಕ ಮನೆಮನೆ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು. ಓಣಂ ಆಚರಣೆ, ಸ್ವಚ್ಛತೆ, ನಶೆಮುಕ್ತ ಸಮಾಜ ನಿರ್ಮಾಣದ ಬಗ್ಗೆ ಸಂವಾದ ನಡೆಯಿತು.
ಜನಜೀವನ ಅಧ್ಯಕ್ಷ ರಮೇಶ್ ಶೇಣವ ಉದ್ಘಾಟಿಸಿದರು. ಸಾಹಿತಿ ಚಂದ್ರಹಾಸ ಕಣಂತೂರು, ಉದ್ಯಮಿ ಇಬ್ರಾಹಿಂ ತಪ್ಷಿಯಾ ನಡುಪದವು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾ, ಶಾರದಾ ಆಯುರ್ವೇದ ಆಸ್ಪತ್ರೆಯ ಡಾ.ಸುರಕ್ಷಾ, ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಡಾ.ಯಶಸ್ವಿನಿ, ವಾಮಪದವು ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗ ಪ್ರಾಧ್ಯಾಪಕ ಡಾ.ಉದಯ, ನವಸಾಕ್ಷರೆ ಯಶೋಧ, ಬಾಳೆಪುಣಿ ಗ್ರಾ.ಪಂ. ಸದಸ್ಯೆ ಸೆಮೀಮಾ, ಸೆಲ್ಕೋ ಮಂಗಳೂರು ವ್ಯವಸ್ಥಾಪಕ ರವೀನಾ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.