‘ಆಫ್ ರೋಡ್’ ಗ್ರಾಮೀಣ ಜನರಲ್ಲಿ ಸ್ಪೂರ್ತಿ ತುಂಬಿದೆ: ಮಂಜು ಭಂಡಾರಿ
ಕೊಣಾಜೆ: ಮುಡಿಪುವಿನ ಗ್ರಾಮೀಣ ಪ್ರದೇಶದಲ್ಲಿ ಕಳೆದ ಕೆಲವು ವರ್ಷದಿಂದ ನಡೆಯುತ್ತಿರುವ ಆಫ್ ರೋಡ್ ಸ್ಪರ್ಧೆಯು ಈ ಭಾಗದ ಜನರಲ್ಲಿ ಹೊಸ ಹುರುಪು, ಉತ್ಸಾಹವನ್ನು ಮೂಡಿಸಿದೆ. ಈ ಆಫ್ ರೋಡ್ ಸ್ಪರ್ಧೆಯಲ್ಲಿ ರಾಜ್ಯ ಅಂತರ್ ರಾಜ್ಯದಿಂದ ಸ್ಪರ್ಧಿಗಳೂ ಭಾಗವಹಿಸಿದ್ದು, ಮುಂದೆಯೂ ಈ ಸ್ಪರ್ಧೆಯು ನಿರಂತರವಾಗಿ ನಡೆದು ಮುಡಿಪು ಪ್ರದೇಶವು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಕಣಂತೂರು ಕ್ಷೇತ್ರದ ಮೊಕ್ತೇಸರರಾದ ಪದ್ಮನಾಭ ರೈ ಯಾನೆ ಮಂಜುನಾಥ ಭಂಡಾರಿ ಅವರು ಹೇಳಿದರು.

ಅವರು ಮುಡಿಪುವಿನ ನಾರ್ಯಗುತ್ತು ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕೆ.ಎ.19-20 ಯುನೈಟೆಡ್ ಆಫ್ ರೋಡ್ ಕ್ಲಬ್ ವತಿಯಿಂದ ಕುಡ್ಲಚಾಲೆಂಜ್ ಸೀಸನ್- 5 ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ನಾವು ಮಾಡುವ ಯಾವುದೇ ಉತ್ತಮ ಕಾರ್ಯಕ್ಕೆ ನಾವು ಸದಾ ಬೆಂಬಲವಾಗಿರಬೇಕು. ನಾವು ಮಾಡುವ ಉತ್ತಮ ಕಾರ್ಯವನ್ನು ಸಮಾಜ ಯಾವತ್ತೂ ಗುರುತಿಸುತ್ತದೆ ಎಂದರು.
ನರಿಂಗಾನ ಕಂಬಳ ಸಮಿತಿಯ ಅಧ್ಯಕ್ಣರಾದ ಪ್ರಶಾಂತ್ ಕಾಜವ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕಾರ್ಯಕ್ರಮ ಮುಡಿಪುವಿನಂತಹ ಗ್ರಾಮೀಣ ಮಟ್ಟದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಕಳೆದ ಮೂರು ವರ್ಷದಿಂದ ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ಇಂತಹ ಕಾರ್ಯಕ್ರಮದ ಸಂಘಟನೆ ಸುಲಭದ ಕೆಲಸವಲ್ಲ. ಆಫ್ ರೋಡ್ ಆಸಕ್ತರಾದ ಅವಿನಾಶ್, ವಿಜೇಶ್ ನಾಯ್ಕ್, ನಾಸೀರ್ ನಡುಪದವು ಮೂವರು ಸೇರಿಕೊಂಡು ಬಹಳ ಪರಿಶ್ರಮದಿಂದ ಈ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಶಿವಪ್ರಸಾದ್ ಮಾಡ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮೇಲ್ತೆನೆ ಸಂಘದ ಅಧ್ಯಕ್ಷರಾದ ಇಬ್ರಾಹಿಂ ನಡುಪದವು, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಣರಾದ ಗೀತಾ ಭಂಡಾರಿ, ಉಪಾಧ್ಯಕ್ಷರಾದ ಸಿ.ಎಂ.ಶರೀಫ್ ಪಟ್ಟೋರಿ,ಮುಖಂಡರಾದ ಪ್ರವೀಣ್ ಆಳ್ವ, ವಿಜೇಶ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೈತ್ತಬೈಲ್, ಶಿವಪ್ರಸಾದ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ
ಯುವ ಉದ್ಯಮಿ ವಿಜಯ ಕುಮಾರ್ ಮರಿಕ್ಕಳ , ಆಫ್ ರೋಡ್ ಆಯೋಜಕರಾದ ವಿಜೇಶ್ ನಾಯ್ಕ್, ನಾಸೀರ್ ನಡುಪದವು, ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.
ನಾಸೀರ್ ನಡುಪದವು ವಂದಿಸಿದರು. ದೃತಿ ಕಾರ್ಯಕ್ರಮ ನಿರೂಪಿಸಿದರು.
ಮುಡಿಪುವಿನಲ್ಲಿ ಆಫ್ ರೋಡ್ ಕುಡ್ಲ ಚಾಲೆಂಜ್ ಸೀಸನ್ 5 ರಲ್ಲಿ ಗೋವಾ ಪಂಜಾಬ್ ಹರಿಯಾಣ, ಮಹಾರಾಷ್ಟ್ರ, ಕೇರಳ, ತಮಿಳ್ ನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 120 ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದಾರೆ.
ಕಳೆದ ಬಾರಿಯೂ ಮುಡಿಪುವಿನಲ್ಲಿ ನಡೆದಿದ್ದ ಆಫ್ ರೋಡ್ ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಜನ ಭಾಗವಹಿಸಿ ಯಶಸ್ವಿಯಾಗಿತ್ತು. ಈ ಬಾರಿ ಮಹಿಳಾ ವಿಭಾಗದಲ್ಲೂ ಸ್ಪರ್ಧೆಯಲು ನಡೆಯಲಿದ್ದು, ಈಗಾಗಲೇ 7 ಮಂದಿ ಲೇಡಿ ಸ್ಪರ್ಧಿಗಳು ಕೂಡಾ ಭಾಗವಹಿಸಿ ಗಮನಸೆಳೆಯುತ್ತಿದ್ದಾರೆ.


