vltvkannada.com ಉಳ್ಳಾಲ:ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರು ಸರಬರಾಜು ಮಾತ್ರ ಅಭಿವೃದ್ಧಿಯಲ್ಲ, ಅದಕ್ಕೂ ಮೀರಿದ ಯೋಚನೆಗಳಿದ್ದು ಪ್ರತಿಯೊಂದು ಮನೆಯಲ್ಲಿ ನೆಮ್ಮದಿ ಇರುವುದೇ ಅಭಿವೃದ್ಧಿಯಾಗಿದ್ದು ನರಿಂಗಾನದಲ್ಲಿ ಅದು ಆಗಿದೆ ಎಂದು ಹೇಳಬಹ ಅಂತಹ ಅಭಿವೃದ್ಧಿ ಎಂದು ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಗುರುದತ್ ಎಂ.ಎನ್. ಶ್ಲಾಘಿಸಿದರು.

ನರಿಂಗಾನ ಗ್ರಾಮ ಪಂಚಾಯಿತಿ, ಸ್ವಚ್ಛ ಗ್ರಾಮ ಅಭಿಯಾನ, ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನ ಪ್ರಯುಕ್ತ ನರಿಂಗಾನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಸ್ವಚ್ಛ ಮನೆ, ಸ್ವಾಭಿಮಾನ ಕುಟುಂಬ’ ಸ್ವಯಂ ಘೋಷಣಾ ಪತ್ರ-ಪುಸ್ತಕ ಬಿಡುಗಡೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರಿಂಗಾನ ಕಂಬಳೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ಹಳ್ಳಿಗಳಲ್ಲಿದ್ದ ಹಿಂದಿನ ಸಂಪ್ರದಾಯ ಪ್ರಸ್ತುತ ದಿನಗಳಲ್ಲಿ ನಗರಕ್ಕೆ ತಲುಪಿ ಒಂದು ದಿನಕ್ಕೆ ಸೀಮಿತವಾಗಿರುವುದು ಖೇದಕರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ವಿಚಾರದಲ್ಲಿ ಮಾತನಾಡುವಾಗ ಸ್ಥಳೀಯ ಭಾಷೆಯಲ್ಲಿ ಮಾತನಾಡಿದಾಗ ಜನರಿಗೆ ಅರ್ಥವೂ ಆಗುತ್ತದೆ, ಇಲ್ಲಿನ ಸಂಸ್ಕೃತಿ ಬಿಂಬಿಸಲೂ ಸಾಧ್ಯವಾಗುತ್ತದೆ ಎಂದರು.
ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಪದ ವಿದ್ವಾಂಸ ಚಂದ್ರಹಾಸ ಕಣಂತೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೈಲಜಾ ಶೆಟ್ಟಿ, ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕಲ್ಲರಕೋಡಿ ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ನಯನ ಕುಮಾರಿ ಕೆ., ಅಂಗನವಾಡಿ ಸುಪರ್ ವೈಸರ್ ಮುಬೀನಾ, ತಾ.ಪಂ. ಸಂಯೋಜಕಿ ನಿಶ್ಮಿತಾ ಹಾಗೂ
ಪಂಚಾಯಿತಿ ಕಾರ್ಯದರ್ಶಿ ನಳಿನಿ ಎ.ಕೆ.
ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಜನಿ ಡಿ. ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಚಂದ ಹಿತ್ಲು ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.