
ಉಳ್ಳಾಲ: ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ಎಬಿ ಶೆಟ್ಟಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ (ಎಬಿಎಸ್ಎಮ್ಐಡಿಎಸ್) ತನ್ನ 40 ವರ್ಷಗಳ ಶ್ರೇಷ್ಠತೆಯನ್ನು ಆಚರಿಸುತ್ತಿರುವ ಹಿನ್ನೆಲೆ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಅಲೂಮ್ನಿ ಮೀಟ್ 2025 – ಪೂರ್ವ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ ಅವಿಷ್ಕಾರ್ ಸಭಾಂಗಣದಲ್ಲಿ ನೆರವೇರಿತು.
ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಉಪಕುಲಪತಿ ಪ್ರೊ.(ಡಾ.) ಎಂ.ಎಸ್. ಮೂಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಶೈಕ್ಷಣಿಕ ಅಭಿವೃದ್ಧಿ, ಜಾಗತಿಕ ಸಹಭಾಗಿತ್ವ, ಸಂಶೋಧನೆ ಮತ್ತು ಆವಿಷ್ಕಾರ, ವಿಸ್ತರಣಾ ಸೇವೆ – ಇವುಗಳಲ್ಲೆಲ್ಲಾ ನಿಟ್ಟೆಯ ಪ್ರಗತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಸಂಸ್ಥೆ ತಲುಪುತ್ತಿರುವುದು ಹೆಮ್ಮೆಯ ಸಂಗತಿ. ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯ ತನ್ನ ಪಯಣದ 40 ವರ್ಷಗಳ ಸ್ಮರಣೀಯ ಹಂತವನ್ನು ಆಚರಿಸುತ್ತಿದೆ. ಈ ದೀರ್ಘ ಪಯಣದ ಮೂಲದಲ್ಲಿ ಸಂಸ್ಥೆ ಅಧ್ಯಕ್ಷರಾದ ವಿನಯ್ ಹೆಗ್ಡೆ ಅವರ ದೃಷ್ಟಿ, ತ್ಯಾಗ ಮತ್ತು ಶ್ರಮವಿದೆ. ಅವರ ಮಾರ್ಗದರ್ಶನದಿಂದಲೇ ನಿಟ್ಟೆ ವಿಶ್ವವಿದ್ಯಾಲಯ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ವಿ.ವಿಯ ಬೆಳವಣಿಗೆಗೆ ನಾಲ್ಕು ಬಲವಾದ ಆಧಾರಗಳಿವೆ. ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ನವೀನತೆ, ವೃತ್ತಿಪರ ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ. ಈ ಮೌಲ್ಯಗಳ ಆಧಾರದ ಮೇಲೆ ಶ್ರೇಷ್ಠತೆಯತ್ತ ಸಾಗುತ್ತಾ ಬಂದಿದೆ. ವಿಶ್ವದ 1,500 ವಿಶ್ವವಿದ್ಯಾಲಯಗಳ ಪೈಕಿ ನಿಟ್ಟೆ ವಿಶ್ವವಿದ್ಯಾಲಯವು 35ನೇ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಕೇವಲ ಒಂದು ಶ್ರೇಯಾಂಕವಲ್ಲ; ಇದು ಅಧ್ಯಾಪನ ಮತ್ತು ಅಧ್ಯಯನದ ಗುಣಮಟ್ಟ, ಬೋಧಕರ ಸಮರ್ಪಣೆ ಮತ್ತು ನಿಟ್ಟೆಯ ಕುಟುಂಬದ ಪ್ರತಿಯೊಬ್ಬ ಸದಸ್ಯರ ಶ್ರಮ ಮತ್ತು ತ್ಯಾಗದ ಪ್ರತಿಫಲವಾಗಿದೆ. ನಿಟ್ಟೆ ಕೇವಲ ಪಠ್ಯಕ್ರಮದ ಬೋಧನೆಗೆ ಸೀಮಿತವಾಗಿರದೆ, ಸಂಪೂರ್ಣ ವೃತ್ತಿಪರರನ್ನು ರೂಪಿಸುವತ್ತ ಗಮನ ಹರಿಸಿದೆ. ಬೌದ್ಧಿಕತೆ, ನೈತಿಕತೆ ಮತ್ತು ಮಾನವೀಯತೆಯೊಂದಿಗೆ ಸಮಾಜ ಸೇವೆ ಮಾಡುವ ನಿಜವಾದ ವೃತ್ತಿಪರರನ್ನು ಬೆಳೆಸುವುದೇ ಉದ್ದೇಶವಾಗಿದೆ ಎಂದರು.
ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಪ್ರೊ.(ಡಾ.) ಮಿತ್ರಾ ಎನ್. ಹೆಗ್ಡೆ ಮಾತನಾಡಿ, ಸಂಸ್ಥೆಯಲ್ಲಿ ತನ್ನ 40ನೇ ವರ್ಷವನ್ನು ಪೂರೈಸುತ್ತಿದ್ದೇನೆ. ಜೀವನದ ದೊಡ್ಡ ಭಾಗ ಈ ಸಂಸ್ಥೆಯೊಂದಿಗೇ ಬೆಸೆದುಕೊಂಡಿದೆ . ಇಂದು ಹಾಜರಾಗಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳು ಎಲ್ಲರೂ ಹಳೆವಿದ್ಯಾರ್ಥಿಗಳೇ. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಒಂದು ವಿಶೇಷತೆಯನ್ನು ಬೆಳೆಸಿಕೊಂಡು, ಸಂಸ್ಥೆಗೆ ಕೀರ್ತಿ ತಂದಿದ್ದಾರೆ.ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಮ್ಮೇಳನ ಮತ್ತು ಹಳೆವಿದ್ಯಾರ್ಥಿ ಮಿಲನ ಅತ್ಯಂತ ಅರ್ಥಪೂರ್ಣವಾಗಿದೆ. ಇದು ಕೇವಲ ಭೇಟಿಯಷ್ಟೇ ಅಲ್ಲ, ಜ್ಞಾನವನ್ನು ನವೀಕರಿಸುವ, ಹೊಸ ವಿಚಾರಗಳನ್ನು ಹಂಚಿಕೊಳ್ಳುವ, ಗುರುಗಳಾಗಿ ಬೋಧಿಸುವುದರ ಜೊತೆಗೆ ಶಿಷ್ಯರಾಗಿ ಕಲಿಯುವ ಅಮೂಲ್ಯ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಕಲ್ಪನೆ ಜೂನ್ ತಿಂಗಳಲ್ಲಿ ಬಂದಾಗ, ನಾನು ಮಾನ್ಯ ಕುಲಪತಿಗಳೊಂದಿಗೆ ಚರ್ಚೆ ನಡೆಸಿದೆ. ಅವರು ಅದಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಿ, ಇದನ್ನು ಇನ್ನಷ್ಟು ವೃತ್ತಿಪರ ರೀತಿಯಲ್ಲಿ ರೂಪಿಸಲು ಪ್ರೇರಣೆ ನೀಡಿದ್ದಾರೆ ಎಂದರು.
ಎ.ಬಿ.ಶೆಟ್ಟಿ ಕಾಲೇಜಿನ ವಿಶ್ರಾಂತ ಡೀನ್ ಡಾ. ಶ್ರೀಧರ್ ಶೆಟ್ಟಿ, ಪೂರ್ವ ಸಮ್ಮೇಳನ ಅಧ್ಯಕ್ಷರು ಡಾ. ಆದಿತ್ಯ ಶೆಟ್ಟಿ, ಉಪಪ್ರಾಂಶುಪಾಲರು ಹಾಗೂ ಖಜಾಂಚಿ ಡಾ. ಎಂ.ಎಸ್. ರವಿ , ಆಯೋಜನಾ ಕಾರ್ಯದರ್ಶಿ ಡಾ. ಶಿಶಿರ್ ಶೆಟ್ಟಿ ಮತ್ತು ಸಹ-ಆಯೋಜನಾ ಕಾರ್ಯದರ್ಶಿ ಡಾ. ಪ್ರೀತೇಶ್ ಶೆಟ್ಟಿ ಉಪಸ್ಥಿತರಿದ್ದರು.