ಮೂಡುಬಿದಿರೆ: ಮಕ್ಕಳು ಕೇವಲ ಪದವಿ, ಡಿಗ್ರಿ, ಪಡೆದರಷ್ಟೇ ಸಾಲದು, ಅವರಲ್ಲಿ ವಿನಯ, ವಿಧೇಯತೆಯ ಗುಣವೂ ಇರಬೇಕು. ಗುರು ಹಿರಿಯರನ್ನು ಗೌರವಿಸುವ ನಮ್ಮ ಸಂಸ್ಕೃತಿ ಬೆಳೆಸಬೇಕು. ಇಲ್ಲದಿದ್ದಲ್ಲಿ. ನಿಯತ್ತು,ಪ್ರಾಮಾಣಿಕತೆ, ಗೌರವ, ಭಕ್ತಿ, ಎಲ್ಲವೂ ಮಾಯವಾಗಿ ಹೆತ್ತವರನ್ನು ವೃದ್ಧಾಶ್ರಮದಲ್ಲಿ ಕಾಣುವ ಪರಂಪರೆ ನಮ್ಮದಾಗಬಹುದು ಎಂದು ವಕೀಲೆ ಸಹನಾ ಕುಂದರ್ ಸೂಡ ಹೇಳಿದರು.

ಅವರು ಇಲ್ಲಿನ ಬನ್ನಡ್ಕ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಭಾನುವಾರ ನಡೆದ ಬೃಹತ್ ಕುಣಿತ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಒಬ್ಬ ಹೆಣ್ಣು ಮಗಳು ಮನಸ್ಸು ಮಾಡಿ ಸದೃಢವಾಗಿ ನಿಂತಲ್ಲಿ ಪ್ರತೀ ಮಕ್ಕಳನ್ನು ಕೂಡ ಸಂಸ್ಕಾರ ಯುತವಾಗಿ ಬೆಳೆಸಿ ಆರೋಗ್ಯವಂತ ಸಮಾಜವನ್ನಾಗಿ ಕಟ್ಟಬಹುದು. ಪ್ರಸಕ್ತ ನಮ್ಮದೇ ಸುತ್ತ ಮುತ್ತ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದಾಗ ಸಂಸ್ಕಾರ ತಪ್ಪಿದ ಬದುಕು ಹೇಗೆ ನರಕಕ್ಕೆ ಸಮಾನವಾಗುತ್ತದೆ ಎಂದು ತಾಯಂದಿರು ತಮ್ಮಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಶಾರದೋತ್ಸವ ಟ್ರಸ್ಟ್‌ನ ಅಧ್ಯಕ್ಷ ಎಂ ದಯಾನಂದ ಪೈ ಉದ್ಘಾಟಿಸಿ ಮೂಡುಬಿದಿರೆಯ ಗ್ರಾಮೀಣ ವಲಯದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಈ ಐತಿಹಾಸಿಕ ಕುಣಿತ ಭಜನಾ ದಾಖಲೆ ಸೃಷ್ಟಿಸಲಿದೆ ಎಂದು ಶುಭ ಹಾರೈಸಿದರು.
ಮುಖ್ಯ ಅಥಿತಿಗಳಾಗಿ ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್,ಬೆಳುವಾಯಿ ಗ್ರಾಮ ಪಂಚಾಯತ್ ಸದಸ್ಯ ಭರತ್ ಶೆಟ್ಟಿ, ವಾಸ್ತು ತಜ್ಞ ರಾಘವೇಂದ್ರ ಭಂಡಾರ್ಕರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಚ್ಚರಕಟ್ಟೆಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಭಾತ್ ಸಿಲ್ಕ್ಸ್‌ನ ಪೂರ್ಣ ಚಂದ್ರ ಜೈನ್, ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಲ್, ಭಜರಂಗದಳ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ಅಭಿಲಾಶ್ ಅರ್ಜುನಾಪುರ, ಕುಣಿತ ಭಜನಾ ಗುರುಗಳಾದ ವಿಜಯ್ ನೀರ್ಕೆರೆ ಉಪಸ್ಥಿತರಿದ್ದರು.

ಸಂಚಾಲಕ ಸತೀಶ್ ಪೂಜಾರಿ, ಪದಾಧಿಕಾರಿಗಳಾದ ದಿನೇಶ್ ಆಚಾರ್ಯ, ನಿತಿನ್ ಮುನ್ನೇರ್, ರಾಜೇಶ್ ಕಾಮತ್, ಭವ್ಯ ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಜನಾ ಕಮ್ಮಟಕ್ಕೆ ವಿಶೇಷ ಪ್ರೋತ್ಸಾಹ ನೀಡಿದ ಪಡುಮಾರ್ನಾಡು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಎಂ ದಯಾನಂದ ಪೈ ಹಾಗೂ ಭಜನಾ ಕಮ್ಮಟವನ್ನು ಸಂಘಟಿಸಿದ ಕುಣಿತ ಭಜನಾ ಗುರುಗಳಾದ ಸತೀಶ್ ಪೂಜಾರಿ ಮತ್ತು ವಿಜಯ್ ನೀರ್ಕೆರೆ ಹಾಗೂ ಭಾರತೀಯ ಸೇನೆಯ ನಿವೃತ್ತ ಯೋಧ ನಿಕೇತ್ ಪೂಜಾರಿ ದಂಪತಿಗಳನ್ನು ಸನ್ಮಾನಿಸಲಾಯಿತು.
ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಸುಮಾರು 85 ಕ್ಕೂ ಹೆಚ್ಚಿನ ಕುಣಿತ ಭಜನಾ ತಂಡಗಳ ಒಂದೂವರೆ ಸಾವಿರಕ್ಕೂ ಹೆಚ್ಚಿನ ಸದಸ್ಯರು ದಾಸ ಸಾಹಿತ್ಯದ ಕುಣಿಕೆ ಭಜನೆಯಲ್ಲಿ ಭಾಗವಹಿಸಿದರು.


