vltvkannada.com ಕೊಣಾಜೆ: ಜಗತ್ತಿನಲ್ಲಿ ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ಭಾರತ ರಾಷ್ಟ್ರದಲ್ಲಿ ಇಂದು 52 ಕೋಟಿಗೂ ಅಧಿಕ 25 ವರ್ಷದೊಳಗಿನ ವಯಸ್ಸಿನ ವಿದ್ಯಾರ್ಥಿಗಳಾಗಿದ್ದಾರೆ. ಆದ್ದರಿಂದ ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಜವಬ್ಧಾರಿ ಮಹತ್ತರವಾದುದು. ವಿದ್ಯಾರ್ಥಿಗಳು ಈ ದೇಶ, ಜಗತ್ತನ್ನು ಅರ್ಥೈಸಿಕೊಂಡು ಮೌಲ್ಯಯುತ ಜ್ಞಾನ, ಸಾಧನೆಯೊಂದಿಗೆ ಪೋಷಕರಿಗೆ, ಕಲಿತ ವಿದ್ಯಾಸಂಸ್ಥೆಗೆ ಗೌರವ ತಂದುಕೊಡುವ ಕಾರ್ಯವಾಗಲಿ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅವರು ಹೇಳಿದರು.

ಅವರು ಕೊಣಾಜೆ ನಡುಪದವಿನ ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಸ್ವಾತಂತ್ರ್ಯ ಪೂರ್ವದಲ್ಲಿ ಶೇ.12 ರಷ್ಟೇ ವಿದ್ಯಾವಂತರಿದ್ದರೆ ಈಗ ಸರಾಸರಿ ಶೇ 78 ರಷ್ಟು ಮಂದಿ ವಿದ್ಯಾವಂತರಿದ್ದಾರೆ. ಇದಕ್ಕೆ ಖಾಸಗಿ ವಿದ್ಯಾಸಂಸ್ಥೆಗಳ ಕೊಡುಗೆಯು ಮುಖ್ಯ ಕಾರಣವಾಗಿವೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದರು.
ಕ್ಯಾಲಿಕಟ್ ಹಾಗೂ ಕಣ್ಣೂರು ವಿವಿಯ ವಿಶ್ರಾಂತ ಕುಲಪತಿ ಡಾ.ಅಬ್ದುಲ್ ರಹಿಮಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನಾವು ಗಳಿಸುವ ಅಂಕಗಳು ಮಾತ್ರ ಸಾಧನೆಯ ಮಾನದಂಡವಲ್ಲ. ಅದರೊಂದಿಗೆ ನಮ್ಮಲ್ಲಿರುವ ಜ್ಞಾನ, ಕಠಿಣ ಪರಿಶ್ರಮ, ಹಿತಾಸಕ್ತಿಗಳು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಿ.ಎ ಎಜ್ಯುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿ.ಎ.ಎಜ್ಯುಕೇಶನ್ ಟ್ರಸ್ಟ ನ ಹಣಕಾಸು ನಿರ್ದೇಶಕರಾದ ಕೆ.ಅಹಮ್ಮದ್ ಕುಟ್ಟಿ, ಪಿಎ ಕಾಲೇಜಿನ ಎಜಿಎಂ ಸರ್ಫುದ್ದೀನ್, ಡೀನ್ ಸಯ್ಯದ್ ಅಮೀನ್ ಅಹ್ಮದ್ , ಆರೀಸ್ ಟಿ.ಡಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿದರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಕೆ.ಸೂಫಿ ಅವರು ಸ್ವಾಗತಿಸಿದರು. ಪ್ರೊ.ಅಜಿತ್ ಕುಮಾರ್ ವಾಸು ವಂದಿಸಿದರು. ತೇಜಸ್ಬಿನಿ ಮಾರ್ಥ ಹಾಗೂ ರಂಜಿತ ಡಿ ಅವರು ಅತಿಥಿಗಳನ್ನು ಪರಿಚಯಿಸಿದರು.