ಶಿಕ್ಷಣಕ್ಕಿದೆ ವ್ಯಕ್ತಿಯ ಭವಿಷ್ಯ ರೂಪಿಸುವ ಶಕ್ತಿ : ಡಾ.ಬಿ.ಇ.ರಂಗಸ್ವಾಮಿ
vltvkannada.com ಕೊಣಾಜೆ: ಶಿಕ್ಷಣ ಮತ್ತು ಭವಿಷ್ಯ ಇವೆರಡರ ನಡುವೆ ಸಂಬಂಧವಿದೆ. ಶಿಕ್ಷಣಕ್ಕೆ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ. ಶಿಕ್ಷಣವು ನಮ್ಮ ಪದವಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿರಲಿ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಬಿ.ಇ.ರಂಗಸ್ವಾಮಿ ಅವರು ಹೇಳಿದರು.
ಅವರು ಕೊಣಾಜೆ ನಡುಪದವಿನ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದು ತಂತ್ರಜ್ಞಾನ ಕ್ಷೇತ್ರವು ಮುಂದುವರಿದಿದ್ದು ಅವಕಾಶಗಳ ಸೃಷ್ಟಿಯಾಗುತ್ತಿವೆ. ಜೊತೆಗೆ ನಮ್ಮ ಮುಂದೆ ಅನೇಕ ಸವಾಲುಗಳೂ ಎದುರಾಗುತ್ತಿವೆ. ಆದ್ದರಿಂದ ಉತ್ತಮ ಮೌಲ್ಯಯುತ ಶಿಕ್ಷಣ, ಪರಿಶ್ರಮ ಹಾಗೂ ಮಾನವೀಯತೆಯೊಂದಿಗೆ ಮುನ್ನಡೆಯಿರಿ. ಅಲ್ಲದೆ ಪೋಷಕರ ಕನಸನ್ನು ನನಸಾಗಿಸಿ ಎಂದರು.
ಕಣ್ಣೂರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರಹಿಮಾನ್ ಅವರು ಮಾತನಾಡಿ, ಜೀವನದಲ್ಲಿ ಯಶಸ್ಸು ಅಷ್ಟೊಂದು ಸುಲಭದ ಮಾತಲ್ಲ. ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಕಂಡುಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ಸಂವಹನದ ಕಲೆ ಅತಿ ದೊಡ್ಡ ಪಾತ್ರವನ್ನು ವಹಿಸಿತ್ತದೆ ಅದರ ಜೊತೆ ಅಭಿವೃದ್ಧಿ ಕೌಶಲ್ಯ, ದೇಹ ಭಾಷೆಯ ಯನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಜ್ಞಾನವಿರಬೇಕು. ಪದವಿಯಲ್ಲಿ ವಿಷಯದ ಆಯ್ಕೆಯ ಬಗ್ಗೆ ಗೊಂದಲವಿರಬಾರದು. ಅದರ ಬಗ್ಗೆ ಅಳವಾದ ಅಧ್ಯಯನ ಹಾಗೂ ಸಾಮಾನ್ಯ ಜ್ಞಾನ ಅತೀ ಮುಖ್ಯವಾಗಿರುತ್ತದೆ ಎಂದರು.
ದುಬಾಯಿಯ ಸಿರಾಜ್ ಹೋಲ್ಡಿಂಗ್ ಇಂಟರ್ ನ್ಯಾಶನಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಖಾದಿರ್ ಪೀರ್ ಷರೀಫ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜೀವನದಲ್ಕಿ ಏರಿಳಿತಗಳು ಸಹಜವಾಗಿ ಇರುತ್ತದೆ ಅದು ಏನೇ ಇದ್ದರೂ ಮೊದಲಿಗೆ ನಮ್ಮ ಜೀವನವನ್ನು ಹಾಗೂ ನಮ್ಮ ಗೆಲುವನ್ನು ಪ್ರತಿ ಕ್ಷಣ ಸಂಭ್ರಮಿಸುವ ಮನೋಭಾವ ಬೆಳೆಯಬೇಕು. ಜೀವನದಲ್ಲಿ ನೀವು ಏನೇ ಸಾಧಿಸಿದರು ಅದು ನಿಮ್ಮ ಹೆತ್ತವರಿಗೆ ಸಲ್ಲಿಸುವ ದೊಡ್ಡ ಗೌರವಾಗಿರುತ್ತದೆ ಎಂದರು.
ಪಿ.ಎ.ಶಿಕ್ಷಣ ಸಂಸ್ಥೆಯ ಮ್ಯಾನೇಂಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪಿಎ ಶಿಕ್ಷಣ ಸಂಸ್ಥೆಯು ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ ಮುನ್ನಡೆಯುತ್ತಿದೆ. ನಮ್ಮ ಜ್ಞಾನ, ಶಿಕ್ಷಣವು ಕೇವಲ ಹಣ ಗಳಿಕೆಗೆ ಮಾತ್ರವಲ್ಲ ಅದು ಉತ್ತಮ ವ್ಯಕ್ತಿತ್ವ ನಿರ್ಮಾಣದೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದರು.

ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೀಝ್ ಎಂ.ಕೆ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿ ಅಬ್ದುಲ್ ಲತೀಪ್, ಹಣಕಾಸು ನಿರ್ದೇಶಕರಾದ ಅಹ್ಮದ್ ಕುಟ್ಟಿ, ಕ್ಯಾಂಪಸ್ ಎಜಿಎಂ ಡಾ.ಶರ್ಪುದ್ದೀನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಧನಾ ಪುರಸ್ಕಾರ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಡಾ.ಸಯ್ಯದ್ ಅಮೀನ್ ಅಹಮ್ಮದ್ ಅವರು ಪರಿಚಯಿಸಿದರು.
ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಸಿಸಿಎ ಸಂಯೋಜಕ ಇಸ್ಮಾಯಿಲ್ ಶಾಫಿ ಎ.ಎಂ.ಅವರು ಸ್ವಾಗತಿಸಿದರು. ಪಿ.ಎ.ಕಾಲೇಜಿನ ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ವಂದಿಸಿದರು. ಪ್ರೊ.ಫಾತಿಮತ್ ರೈಹಾನ್ ಹಾಗೂ ಡಾ.ಶಬಾಝ್ ಕಾರ್ಯಕ್ರಮ ನಿರೂಪಿಸಿದರು. .