ವಿಟ್ಲ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಈಗಿನ ಕಾಲದಲ್ಲಿ ಸಾಲೆತ್ತೂರು ತರಕಾರಿ ಅಂಗಡಿಯ ಮಾಲಕ ಸಾದಿಕ್ ಕರೈ ಅವರು ಕಾಡುಮಠ ಪ್ರಾಥಮಿಕ ಶಾಲೆಯ ಮದ್ಯಾಹ್ನದ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ನೀಡುತ್ತಾ ನಿಜವಾದ ಶಿಕ್ಷಣ ಪ್ರೇಮಿ ಎಣಿಸಿದ್ದಾರೆ.

ಸಾಲೆತ್ತೂರು ಸಮೀಪದ ಕಾಡುಮಠ ಶಾಲೆಯ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಅಮೂಲ್ಯವಾದ ಸಹಕಾರ ನೀಡುತ್ತಿರುವ ಸಾಲೆತ್ತೂರು ತರಕಾರಿ ಅಂಗಡಿಯ ಮಾಲಕ ಶ್ರೀ ಸಾದೀಕ್ ಕರೈ ಅವರ ಈ ಸೇವೆಯನ್ನು ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಪಂಚಾಯತ್ ಗುರುತಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ.
ಪ್ರತಿ ದಿನದ ಬಿಸಿಯೂಟಕ್ಕೆ ಅಗತ್ಯವಿರುವ ಎಲ್ಲಾ ತರಕಾರಿಗಳನ್ನು ಉಚಿತವಾಗಿ ನೀಡುವ ಮೂಲಕ, ಅವರು ತನ್ನ ಊರಿನ ಶಾಲೆಯ ವಿದ್ಯಾರ್ಥಿಗಳ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಈ ಸೇವಾಭಾವನೆ ಮತ್ತು ಮಾನವೀಯತೆ ನಿಜಕ್ಕೂ ಶ್ಲಾಘನೀಯವಾಗಿದೆ.
ತನ್ಮೂಲಕ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಉತ್ತಮ ಆಹಾರ ಪಡೆಯುವುದರ ಜೊತೆಗೆ, ಸಮಾಜದಲ್ಲಿ ಪರೋಪಕಾರಿ ಮೌಲ್ಯಗಳನ್ನೂ ಕಲಿಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಉದ್ಯಮವಾಗಿಸುವವರ ನಡುವೆ ಸಾದೀಕ್ ಅವರಂತಹ ಪರೋಪಕಾರಿ ವ್ಯಕ್ತಿಗಳನ್ನು ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಾ ಇತರರಿಗೆ ಪ್ರೇರಣೆ ನೀಡಬೇಕಿದೆ ಎಂದು ಕಾಡುಮಠದ ಜನರು ಅಭಿಪ್ರಾಯಪಟ್ಟಿದ್ದಾರೆ.


