
ಮಂಗಳೂರು:ಆ.28- ರೌಡಿಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ನಂತರ ಮಂಗಳೂರಿನ ಆಸುಪಾಸು ಪ್ರದೇಶಗಳಲ್ಲಿ ಹಲವಾರು ತಲ್ವಾರ್ ದಾಳಿಗಳು ನಡೆದಿತ್ತು. ಅದೇ ಸಂದರ್ಭದಲ್ಲಿ ಸಜಿಪ ಸಮೀಪದ ನಂದಾವರದಲ್ಲಿ ಉಮ್ಮರ್ ಫಾರೂಕ್ ಎಂಬವರ ಮೇಲೆಯೂ ದಾಳಿ ನಡೆದ ಬಗ್ಗೆ ವರದಿಯಾಗಿ ಪೊಲೀಸರು FIR ದಾಖಲಿಸಿದ್ದರು. ಆದರೆ ತಲ್ವಾರ್ ದಾಳಿಯ ಆರೋಪಿಗಳನ್ನು ಪತ್ತೆಹಚ್ಚಲು ವಿಫಲರಾದ ಪೋಲಿಸರು ಈಗ ದೂರುದಾರನನ್ನೇ ಬಂಟ್ವಾಳ ಸುಳ್ಳು ದೂರು ನೀಡಿರುವ ಆರೋಪ ಹೊರಿಸಿ ಬಂಧಿಸಿ ಜೈಲಿಗಟ್ಟಿರುವುದು ಆಘಾತಕಾರಿ ಹಾಗೂ ನ್ಯಾಯದ ಮೇಲಿನ ನಂಬಿಕೆಗೆ ಕೊಡಲಿಯೇಟು ಬಿದ್ದಂತಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ಸಾಹುಲ್ ಹಮೀದ್ ಎಸ್ ಎಚ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ದೂರುದಾರನಾಗಿದ್ದ ಉಮ್ಮರ್ ಫಾರೂಕ್ ನನ್ನು ವಿಚಾರಣೆಯ ನೆಪದಲ್ಲಿ ಹಲವಾರು ಬಾರಿ ಠಾಣೆಗೆ ಕರೆಸಿದಾಗ ಮಾನಸಿಕವಾಗಿ ಜರ್ಜರಿತನಾಗಿದ್ದರು. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಲ್ಲದೇ ಆತನ ಜೀವನೋಪಾಯಕ್ಕಾಗಿ ಆಶ್ರಯವಾಗಿದ್ದ ಆಟೋವನ್ನು ಕೂಡ ಪೋಲಿಸರು ತನಿಖೆಯ ನೆಪದಲ್ಲಿ ಹಲವಾರು ಸಮಯಗಳಿಂದ ವಶದಲ್ಲಿರಿಸಿದ ಸಂದರ್ಭದಲ್ಲಿ ದೂರುದಾರ ಅಸಾಹಯಕನಾಗಿದ್ದರೂ ತನಿಖೆಗೆ ಸಂಪೂರ್ಣ ಸಹಕಾರ ನೀಡಿ ತನ್ನ ಹೇಳಿಕೆಯಲ್ಲಿ ದೃಡವಾಗಿದ್ದರು. ಪೋಲಿಸರು ಮಂಪರು ಪರೀಕ್ಷೆಗೆ ಒತ್ತಾಯಿಸಿದಾಗ ಅದನ್ನು ಆತ ಆರೋಗ್ಯದ ದೃಷ್ಟಿಯಿಂದ ಒಪ್ಪಿಗೆ ನೀಡಿರಲಿಲ್ಲ. ಆದರೆ ಪೋಲಿಸರು ದೂರುದಾರನ ವಿರುದ್ಧವೇ ಕಠಿಣ ಸೆಕ್ಷನ್ ಗಳಡಿಯಲ್ಲಿ FIR ದಾಖಲಿಸಿ ಉಪಾಯದಿಂದ ಠಾಣೆಗೆ ಕರೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿರುವುದು ಆಘಾತಕಾರಿ. ಹೀಗಾದರೆ ಸಂತ್ರಸ್ತರು ಯಾವ ಧೈರ್ಯದಲ್ಲಿ ನ್ಯಾಯಕ್ಕಾಗಿ ಪೋಲಿಸ್ ಠಾಣೆಯ ಮೆಟ್ಟಿಲೇರುವುದು ಎಂದು ಸಾಮಾನ್ಯ ಜನತೆ ಆಲೋಚಿಸುವಂತಾಗಿದೆ.
ಈ ಎಲ್ಲಾ ಘಟನೆಗಳು ದಕ್ಷ ಪೋಲಿಸ್ ಅಧಿಕಾರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಗಮನಕ್ಕೆ ಬಂದಿರಬಹುದು ಎಂದು ನಾವು ಭಾವಿಸುವುದಿಲ್ಲ. ಯಾಕೆಂದರೆ ಒಂದು ವೇಳೆ ಅವರ ಗಮನಕ್ಕೆ ವಾಸ್ತವಾಂಶದ ಮಾಹಿತಿ ಇರುತ್ತಿದ್ದರೆ ಸಂತ್ರಸ್ತನಿಗೆ ಪೋಲಿಸರಿಂದ ಅನ್ಯಾಯವಾಗಲು ಬಿಡುತ್ತಿರಲಿಲ್ಲ ಎಂದು ನಾವು ನಂಬುತ್ತೇವೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


