ಮೂಡುಬಿದಿರೆ : ಶುದ್ಧ ಮನಸ್ಸಿನ ಮೂಲಕ ತನ್ನ ಕಾಯಕವನ್ನು ಸುದೀರ್ಘ ಅವಧಿಯವರೆಗೆ ನಿರ್ವಹಿಸುತ್ತಾ ಬಂದಿರುವ ಡಾ. ರತ್ನಾಕರ ಶೆಟ್ಟಿ ಮೂಡುಬಿದಿರೆಯಲ್ಲಿ ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಕಾಯಕವನ್ನು ನಿರ್ಮಲವಾದ ಮನಸ್ಸಿನಿಂದ ಮಾಡುವ ಮೂಲಕ ಜನರ ಸೇವೆ ಭಗವಂತನ ಸೇವೆ ಎಂಬ ಭಾವನೆಯನ್ನು ಬೆಳೆಸಿಕೊಂಡವರು ಎಂದು ಮೂಡುಬಿದಿರೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಹೇಳಿದರು.

ಅವರು ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ-2025 ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಿದ ಹಿರಿಯರ ಕಡೆ ನಮ್ಮ ನಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಡುಬಿದಿರಿಯ ಹಿರಿಯ ವೈದ್ಯ ಡಾ.ಬಿ ರತ್ನಾಕರ ಶೆಟ್ಟಿ ಅವರ ಮನೆಗೆ ತೆರಳಿ ಸಾಹಿತ್ಯ ಪರಿಷತ್ತಿನ ಪರವಾಗಿ ಆತ್ಮೀಯವಾಗಿ ಗೌರವಿಸಲಾಯಿತು.
ಅವರು ತಮ್ಮ ವೃತ್ತಿ ಬದುಕಿನ ನೋವು ನಲಿವುಗಳನ್ನು ರತ್ನಾಕರ ಶೆಟ್ಟಿ ಅವರು ನೆನಪಿಸಿಕೊಂಡು ಭಾವುಕರಾದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ಹೋಬಳಿ ಘಟಕದ ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು ಅವರು ಪ್ರಾಸ್ತಾವಿಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಹಿನ್ನೆಲೆ ಮತ್ತು ಬೆಳೆದು ಬಂದ ರೀತಿಯನ್ನು ವಿವರಿಸಿ ಪರಿಷತ್ತಿನ ಉದ್ದೇಶವನ್ನು ಮತ್ತು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ, ಸದಸ್ಯ ಪದ್ಮನಾಭ ಮಿಜಾರು, ಹೋಬಳಿ ಘಟಕದ ಸದಸ್ಯೆ ರೇಣುಕಾ ಉಪಸ್ಥಿತರಿದ್ದರು.
ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ದೊರೆಸ್ವಾಮಿ ಕೆ.ಎನ್. ಅವರು ಸ್ವಾಗತಿಸಿದರು. ಸದಸ್ಯರಾಗಿರುವ ಶ್ರೀಮತಿ ನಾಗರತ್ನ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕಿ, ಸಾಹಿತಿ ಅನಿತಾ ಶೆಟ್ಟಿ ಅವರು ವಂದಿಸಿದರು.
. .


